ಅನಗತ್ಯ ಆತಂಕ ಬೇಡ: ಎಚ್ಚರಿಕೆ ವಹಿಸುವುದು ಅಗತ್ಯ

Corona
Published on

ಜಾಗತಿಕವಾಗಿ ಹಾಗೂ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ವೈರಾಣು ರೂಪಾಂತರಿ ಉಪತಳಿ ಸೋಂಕು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲೂ ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಆದರೆ, ಆರೋಗ್ಯ ತಜ್ಞರು ಮತ್ತು ನುರಿತ ವೈದ್ಯರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರೂಪಾಂತರಿ ಉಪತಳಿ ಮಾರಣಾಂತಿಕವಲ್ಲ, ಅಪಾಯಕಾರಿಯೂ ಅಲ್ಲ; ಅದರ ಪ್ರಸರಣ ವೇಗ ಹೆಚ್ಚಿರಬಹುದಷ್ಟೇ. ಅದರಿಂದ ಭಯಭೀತರಾಗುವ ಅಗತ್ಯವಿಲ್ಲ ಎಂದಿದ್ದಾರೆ. ಹೆಚ್ಚುಕಡಿಮೆ ಎರಡು ವರ್ಷಗಳ ಕಾಲ ಕರೊನಾ ಸೋಂಕು ಜನಜೀವನವನ್ನು ಕಾಡಿತು. ಲಾಕ್​ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು. ವಿಶ್ವದ ಇತರ ದೇಶಗಳಿಗಿಂತ ಭಾರತ ಹೆಚ್ಚು ಪರಿಣಾಮಕಾರಿಯಾಗಿ ಕೋವಿಡ್ ವಿರುದ್ಧ ಹೋರಾಡಿತಲ್ಲದೆ, ವಿಶ್ವದ ಅತ್ಯಂತ ದೊಡ್ಡ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿತು. ಆರೋಗ್ಯ ವ್ಯವಸ್ಥೆಯೂ ಇದರಿಂದ ಸನ್ನದ್ಧಗೊಂಡಿತು ಎಂಬುದು ಗೊತ್ತಿರುವಂಥದ್ದೇ.

ನೆರೆಯ ಕೇರಳ ರಾಜ್ಯದಲ್ಲಿ ಕರೊನಾ ಪ್ರಕರಣಗಳು ಪತ್ತೆಯಾದ ಬಳಿಕ, ಕರ್ನಾಟಕಕ್ಕೂ ವೈರಾಣು ರೂಪಾಂತರಿ ಪ್ರವೇಶಿಸಿದೆ. ಆದರೆ, ಕಳೆದ ಬಾರಿಯ ಅನುಭವದಿಂದ ಈಗ ಈ ಸೋಂಕಿನ ವಿರುದ್ಧ ಹೋರಾಡುವುದು ಹೆಚ್ಚು ತ್ರಾಸದಾಯಕವೇನಲ್ಲ. ಅಲ್ಲದೆ, ಈಗ ತೀವ್ರ ಚಳಿಯ ವಾತಾವರಣ ಇರುವುದರಿಂದ ಶೀತ, ಕೆಮ್ಮು, ಜ್ವರದ ರೋಗಿಗಳ ಸಂಖ್ಯೆ ಹೆಚ್ಚಿದೆ. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ‘ಕೋವಿಡ್ ಸೋಂಕಿತರು’ ಎಂದು ದೃಢಪಡುವುದು ಸ್ವಾಭಾವಿಕವೇ. ಹಾಗಾಗಿ, ಅನಗತ್ಯವಾಗಿ ಆತಂಕಕ್ಕೆ ಒಳಗಾಗದೆ, ಪರಿಸ್ಥಿತಿಯನ್ನು ಅತಿಯಾಗಿ ವೈಭವಿಕರಿಸದೆ ವಾಸ್ತವದ ದೃಷ್ಟಿಯಿಂದ ನೋಡಬೇಕಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಸ್ತಮಾ ರೋಗಿಗಳು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಈಗಲೂ ಅದು ಅನಿವಾರ್ಯ.

ರಾಜ್ಯ ಸರ್ಕಾರ ಕೂಡ ಪರಿಸ್ಥಿತಿಯನ್ನು ಅವಲೋಕಿಸಲು ಗುರುವಾರ ಉನ್ನತ ಮಟ್ಟದ ಸಭೆಯನ್ನು ನಡೆಸಿದೆ. ‘ಗುಂಪುಗೂಡಿ ಆಚರಣೆ, ಜನದಟ್ಟಣೆಯಿರುವೆಡೆ ಮಾಸ್ಕ್ ಧರಿಸುವುದು ಉತ್ತಮ. ಕೇಂದ್ರ, ರಾಜ್ಯ ಸರ್ಕಾರಗಳು ಈಗಾಗಲೇ ಹೊರಡಿಸಿದ ಮಾರ್ಗಸೂಚಿ, ಸಲಹೆಗಳನ್ನು ಪಾಲಿಸಿದರೆ ಸಾಕು. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಪ್ರತ್ಯೇಕವಾಗಿ ಮಾರ್ಗಸೂಚಿ ಹೊರಡಿಸುವುದಿಲ್ಲ. ಜತೆಗೆ ಯಾವುದೇ ನಿರ್ಬಂಧ ವಿಧಿಸುವುದೂ ಇಲ್ಲ. ಜನರು ಸ್ವಯಂಪ್ರೇರಿತವಾಗಿ ಮುನ್ನೆಚ್ಚರಿಕೆ ವಹಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಅಬಾಧಿತವಾಗಿರಲಿದೆ. ಹಾಗಂತ, ಜನರು ತೀರಾ ನಿರ್ಲಕ್ಷ್ಯ ವಹಿಸುವಂತಿಲ್ಲ ಅಥವಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುವಂತಿಲ್ಲ. ಜನಸಂದಣಿ ಇರುವೆಡೆ ಮುಖಗವಸು ಧರಿಸುವುದು, ಜ್ವರ, ಶೀತದ ಲಕ್ಷಣಗಳು ಕಂಡುಬಂದರೆ ಕೋವಿಡ್ ಪರೀಕ್ಷೆ ಮಾಡಿಸುವುದು, ಹಿರಿಯರ, ಮಕ್ಕಳ ಕಾಳಜಿ ವಹಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಪಾಲಿಸಿದರೆ ಅಪಾಯಕ್ಕೆ ಆಹ್ವಾನ ನೀಡದೆ ಕೋವಿಡ್ ಆತಂಕವನ್ನು ಗೆಲ್ಲಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net