ನ್ಯುಮೊನಿಯಾ ನಿರ್ಲಕ್ಷಿಸದಿರಿ; ರೋಗಲಕ್ಷಣಕ್ಕೆ ವೈದ್ಯರಿಂದಲೇ ಚಿಕಿತ್ಸೆ..

Clubhouse F
Published on
ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿರುವ ನ್ಯುಮೊನಿಯಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಜಯವಾಣಿ ಮತ್ತು ದಿಗ್ವಿಜಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಕ್ಲಬ್​ಹೌಸ್ ಸಂವಾದ’ದಲ್ಲಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ರಘು, ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ ಹಾಗೂ ಮೈಸೂರಿನ ಬಿಜಿಎಸ್ ಗ್ಲೋಬಲ್ ಸಂಸ್ಥೆಯ ಡಾ. ಶ್ರೀಹರ್ಷವರ್ಧನ ಅವರು ಪಾಲ್ಗೊಂಡು ನ್ಯುಮೊನಿಯಾ ಸೋಂಕಿಗೆ ಕಾರಣಗಳು, ಮತ್ತದರ ಲಕ್ಷಣಗಳು, ಪರಿಣಾಮ, ಚಿಕಿತ್ಸೆ ಹಾಗೂ ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ನ್ಯುಮೊನಿಯಾ ಎಂದರೆ ಶ್ವಾಸಕೋಶದ ಸೋಂಕು. ಬಾಯಿ ಅಥವಾ ಮೂಗಿನ ಮೂಲಕ ಶ್ವಾಸಕೋಶದ ಒಳಗೆ ಸೇರುವ ಸೂಕ್ಷ್ಮಜೀವಿಗಳಿಂದಾಗಿ ಸೋಂಕು ಉಂಟಾಗುತ್ತದೆ. ಇದರಲ್ಲಿ ಶೇಕಡ 80 ಬ್ಯಾಕ್ಟೀರಿಯಾದಿಂದ ಬರುತ್ತದೆ. ಶೇ.10 ವೈರಸ್​ನಿಂದ ಹಾಗೂ ಶೇ.10 ಫಂಗಸ್ (ಶಿಲೀಂಧ್ರ) ಹಾಗೂ ಮತ್ತಿತರೆ ಕಾರಣಗಳಿಂದ ಬರುತ್ತದೆ. ಜಾಗತಿಕವಾಗಿ ಶೇ.26 ನ್ಯುಮೊನಿಯಾ ಪ್ರಕರಣಗಳು ಭಾರತದಲ್ಲಿ ವರದಿಯಾಗುತ್ತಿದ್ದು, ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಮಾರಣಾಂತಿಕ ರೋಗವಾಗಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆದಲ್ಲಿ ಗುಣಪಡಿಸಬಹುದಾಗಿದೆ. ಇದು 5 ವರ್ಷದ ಒಳಗಿನ ಮಕ್ಕಳಲ್ಲಿ ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ಕಂಡು ಬರುತ್ತದೆ. ಹೀಗಾಗಿ ಈ ವಯೋಮಾನದವರು ನ್ಯುಮೊನಿಯಾ ಬಗ್ಗೆ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ರಘು ತಿಳಿಸಿದರು.

ಸಾಂಕ್ರಾಮಿಕ ರೋಗ: ನ್ಯುಮೊನಿಯಾ ಸಾಂಕ್ರಾಮಿಕ ರೋಗ ವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನ್ಯುಮೋನಿಯಾಗೆ ತುತ್ತಾದ ವ್ಯಕ್ತಿ ಬಳಸುವ ವಸ್ತುಗಳನ್ನು ಮತ್ತೊಬ್ಬರು ಬಳಸಿದಾಗ ನ್ಯುಮೊನಿಯಾ ಹರಡುತ್ತದೆ. ಸೀನುವಾಗ ಮಾಸ್ಕ್ ಧರಿಸುವುದು ಉತ್ತಮ.

ರೋಗ ಲಕ್ಷಣಗಳು

ನ್ಯುಮೊನಿಯಾದ ಪ್ರಮುಖ ಲಕ್ಷಣಗಳು ಜ್ವರ, ಚಳಿ, ನಡುಕ, ಕೆಮ್ಮು, ಕಫ ಕಟ್ಟುವುದು, ಹೃದಯಬಡಿತ ಹೆಚ್ಚುವುದು, ಉಸಿರಾಟದ ಸಮಸ್ಯೆ, ಜತೆಗೆ ಬಳಲಿಕೆ, ಆಯಾಸ, ಮೈ-ಕೈ ನೋವು ಹಾಗೂ ಅಸ್ತಮಾ ರೋಗಿಗಳಿಗೆ ನ್ಯುಮೊನಿಯಾ ಸಾಮಾನ್ಯವಾಗಿ ಕಾಡುತ್ತದೆ ಎಂದು ಮೈಸೂರಿನ ಬಿಜಿಎಸ್ ಗ್ಲೋಬಲ್ ಸಂಸ್ಥೆಯ ಡಾ. ಶ್ರೀಹರ್ಷವರ್ಧನ್ ಮಾಹಿತಿ ನೀಡಿದರು.

ಚಿಕಿತ್ಸೆ ಹೇಗೆ?

ನ್ಯುಮೊನಿಯಾದಲ್ಲಿ ಹಲವು ಬಗೆಗಳಿವೆ. ಕರೊನಾ ಬಂದ ಮೇಲೆ ಈ ನ್ಯುಮೊನಿಯಾ ಪ್ರಕರಣಗಳು ಹೆಚ್ಚಾಗಿವೆ. ವೈರಲ್ ನ್ಯುಮೊನಿಯಾ ಎಂದರೆ, ಜ್ವರ, ಶೀತ, ಕೆಮ್ಮಿನ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಇನ್ನೂ ಬ್ಯಾಕ್ಟೀರಿಯಾ ನ್ಯುಮೊನಿಯಾ ಶ್ವಾಸಕೋಶದಲ್ಲಿ ಹೆಚ್ಚು ಕಫ ಸೇರಿ, ಅದು ಬ್ಯಾಕ್ಟೀರಿಯಾಗಳಾಗಿ ಪರಿವರ್ತನೆಗೊಂಡು ತೊಂದರೆ ಕೊಡುತ್ತದೆ. ಫಂಗಸ್​ನಿಂದಲೂ ನ್ಯುಮೊನಿಯಾ ಬರುತ್ತದೆ. ಸಮಸ್ಯೆ ಎದುರಾದ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದಲ್ಲಿ, ಮುಂದೆ ಆಗಬಹುದಾದ ಅನಾಹುತ ತಡೆಯಬಹುದು.

ನ್ಯುಮೊನಿಯಾ ರೋಗ ಲಕ್ಷಣಗಳು ಕಂಡು ಬಂದಲ್ಲಿ ಮೊದಲು ದೇಹದಲ್ಲಿನ ಆಮ್ಲಜನಕ ಮಟ್ಟ (ಸ್ಯಾಚುರೇಷನ್) ನೋಡಬೇಕು. ಬಳಿಕ ರಕ್ತಪರೀಕ್ಷೆ, ಕಫದ ಪರೀಕ್ಷೆ , ಎದೆಯ ಎಕ್ಸ್ ರೇ ಇತ್ಯಾದಿ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸಾಮಾನ್ಯ ಪ್ರಕರಣಗಳಲ್ಲಿ ಆಂಟಿಬಯೋಟಿಕ್ಸ್​ನಿಂದಲೇ ಗುಣಪಡಿಸಬಹುದು. ಗಂಭೀರ ಸಂದರ್ಭದಲ್ಲಿ ಆಸ್ಪತ್ರೆ ವಾಸ ಅಗತ್ಯವಾಗುತ್ತದೆ. ಐವಿ ಫ್ಲೂಯಿಡ್ ನೀಡಲಾಗುತ್ತದೆ. ಈ ಹಂತದಲ್ಲಿ ರೋಗಿ ಆಮ್ಲಜನಕವನ್ನು ಅವಲಂಬಿಸುತ್ತಾನೆ. ಇದನ್ನು ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ ತಿಳಿಸಿದರು.

ಕಾಳಜಿಗಳೇನು?

  • ಜ್ವರ ಸೇರಿದಂತೆ ಯಾವುದೇ ರೀತಿಯ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು.
  • ಆರೋಗ್ಯ ಸಮಸ್ಯೆಗಳಿಗೆ ಸ್ವಯಂ ಔಷಧಗಳನ್ನು ಸೇವಿಸಬಾರದು.
  • ಹಣ್ಣು, ತರಕಾರಿ ಹೆಚ್ಚು ಸೇವಿಸ ಬೇಕು. ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಉತ್ತಮ.
  • ಬಿಸಿ ಹಾಗೂ ತಾಜಾ ಊಟ ಸೇವನೆ, ಕಾಯಿಸಿ ಆರಿಸಿದ ನೀರು ಕುಡಿಯುವುದು.
  • ಕೈಗಳನ್ನು ಸದಾ ಸ್ವಚ್ಛವಾಗಿಟ್ಟು ಕೊಳ್ಳುವುದರಿಂದ ಸೋಂಕು ರೋಗಗಳನ್ನು ದೂರವಿಡಬಹುದು.
  • ಮಕ್ಕಳನ್ನು ರಕ್ಷಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆ ಹಾಕಿಸಿ.
  • ಅಸ್ತಮಾ, ಉಸಿರಾಟದ ತೊಂದರೆ, ಅಲರ್ಜಿ ಸೇರಿದಂತೆ ಶೀತ ಸಂಬಂಧಿ ಸಮಸ್ಯೆ ಇರುವವರು ಮಳೆ ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಇರಬೇಕು.
ನ್ಯುಮೊನಿಯಾ ಬಂದ ತಕ್ಷಣ ಎಲ್ಲಿ ಚಿಕಿತ್ಸೆ ಪಡೆಯಬೇಕು?

ಶೇ.90 ಪ್ರಕರಣಗಳಲ್ಲಿ ರೋಗಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಗಾಬರಿಯಾಗಬೇಕಿಲ್ಲ. ಯಾವ ರೀತಿಯ ನ್ಯುಮೊನಿಯಾ ಎಂಬುದನ್ನು ತಿಳಿದುಕೊಳ್ಳಬೇಕು. ಇದನ್ನು ವೈದ್ಯರು ಮಾಡುತ್ತಾರೆ. ಸ್ವಲ್ಪ ರೋಗಲಕ್ಷಣ ಕಂಡು ಬಂದರೂ ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಜ್ವರ ಬಂದ ತಕ್ಷಣ ಬೇರೆ ಯಾರಿಗೋ ಬರೆದಿರುವ ಮಾತ್ರೆಗಳನ್ನು ತೆಗೆದುಕೊಳ್ಳುವುದು. ಮೆಡಿಕಲ್​ನಲ್ಲಿ ದೊರೆಯುವ ಸ್ಟಿರಾಯ್ಡ್​​ಗಳನ್ನು ತೆಗೆದುಕೊಳ್ಳುವುದು ತಪ್ಪು. ಎಚ್​ಐವಿ, ಮಧುಮೇಹಿ, ರಕ್ತದ ಒತ್ತಡ ಇರುವವರು ಎಚ್ಚರದಿಂದ ಇರಬೇಕು.

ಕರೊನಾ, ನ್ಯುಮೊನಿಯಾ ಒಟ್ಟಿಗೆ ಬಂದಾಗ ಹೇಗೆ ಗುರುತಿಸುವುದು?

ಕೋವಿಡ್ ಲಕ್ಷಣ ಕಾಣಿಸಿ ಕೊಂಡಾಗಲೇ ಆರ್​ಟಿಪಿಸಿಆರ್, ಸಿಟಿಸ್ಕಾ್ಯನ್ ಮಾಡಿಸಬೇಕು.ಇದರಲ್ಲಿ ನ್ಯುಮೊನಿಯಾ ಪ್ರಮಾಣ ಎಷ್ಟಿದೆ ಎಂಬುದು ತಿಳಿಯುತ್ತದೆ. ಕರೊನಾ ಇರುವುದರಿಂದ ಬಹುತೇಕ ರೋಗಿಗಳಿಗೆ ನ್ಯುಮೊನಿಯಾ ಬರುವ ಸಾಧ್ಯತೆ ಕೂಡ ಹೆಚ್ಚಾಗಿಯೇ ಇರುತ್ತದೆ.

ನ್ಯುಮೊನಿಯಾ ದೀರ್ಘಕಾಲ ಕಾಡುವ ರೋಗವೇ?

ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಮಾತ್ರ ಇದು ದೀರ್ಘಕಾಲದ ಕಾಯಿಲೆಯಾಗಿ ಪರಿವರ್ತನೆಯಾಗಬಹುದು. ಲಕ್ಷಣಗಳು ಕಂಡು ಬಂದಾಗ ವಾರದೊಳಗೆ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಮಿಷಕ್ಕೆ ಸಾಮಾನ್ಯವಾಗಿ 12ರಿಂದ 20 ಬಾರಿ ಉಸಿರಾಟ ನಡೆಸುತ್ತೇವೆ. ಅದು ಜಾಸ್ತಿ ಆದಲ್ಲಿ ನ್ಯುಮೊನಿಯಾ ಪರೀಕ್ಷೆ ಮಾಡಿಸಬೇಕು.

ಎಚ್​ಐವಿ ಪಾಸಿಟಿವ್ ಇರುವವರಿಗೆ ನ್ಯುಮೊನಿಯಾ ಬಂದಲ್ಲಿ ಏನು ಮಾಡಬೇಕು?

ಇವರಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆ ಇರುವುದರಿಂದ ನ್ಯುಮೊನಿಯಾ ಬರುವ ಸಾದ್ಯತೆ ಹೆಚ್ಚು. ಪ್ರತಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕಾಲ ಕಾಲಕ್ಕೆ ಸಿಡಿ4 ಪರಿಶೀಲನೆ ಮಾಡಿಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ರೋಗನಿರೋಧಕ ಶಕ್ತಿ ಹೆಚ್ಚುವಂತಹ ಔಷಧಗಳನ್ನು ಸೇವಿಸಬೇಕು.

ಹೃದ್ರೋಗಿಗಳಿಗೆ ನ್ಯುಮೊನಿಯಾ ಬಂದಲ್ಲಿ ಏನು ಮಾಡಬೇಕು?

ಹೃದ್ರೋಗಿಗಳಿಗೂ ನ್ಯುಮೊನಿಯಾ ಹೆಚ್ಚಾಗಿ ಕಾಡುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ನಿರಂತರವಾಗಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಧೂಮಪಾನ, ಮದ್ಯಪಾನ ಮಾಡುವವರಿಗೆ ಹೆಚ್ಚಾಗಿ ನ್ಯುಮೊನಿಯಾ ಕಾಡುತ್ತಾ?

ಹೌದು. ಎಲ್ಲ ಆಹಾರ ಸೇವಿಸುವ ಜನರಿಗೆ ನ್ಯುಮೊನಿಯಾ ಕಾಡುತ್ತದೆ ಎಂದ ಮೇಲೆ, ದುಷ್ಚಟಗಳನ್ನು ಹೊಂದಿರುವವರಿಗೆ ಹೆಚ್ಚಾಗಿಯೇ ಕಾಡುತ್ತದೆ. ಸಾಧ್ಯವಾದಷ್ಟು ಚಟಗಳಿಂದ ದೂರ ಇರಬೇಕು. ನಿಗದಿತ ಸಮಯಕ್ಕೆ ಬಿಸಿಆಹಾರ ಸೇವನೆ ಮಾಡಬೇಕು. ಪ್ರಾಣಾಯಾಮವನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಬೇಕು.

ಮಕ್ಕಳಿಗೆ ನ್ಯುಮೊನಿಯಾ ವ್ಯಾಕ್ಸಿನ್ ಎಂದಿನಿಂದ ಆರಂಭವಾಗಲಿದೆ?

ಈಗಾಗಲೇ, ಇದಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಪ್ರತಿ ಗುರುವಾರ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ನ್ಯುಮೋನಿಯಾದಿಂದ ರಕ್ಷಣೆ ಒದಗಿಸುವ ನ್ಯೂಮೊಕಾಕಲ್ ಲಸಿಕೆ ನೀಡಲಾಗುತ್ತಿದೆ. ಒಂದೂವರೆ ತಿಂಗಳ ಮಗು, ಮೂರುವರೆ ಮತ್ತು 9 ತಿಂಗಳ ಮಕ್ಕಳಿಗೆ ಲಸಿಕೆ ನೀಡುತ್ತಿದ್ದೇವೆ. ಬೇರೆ ಮಕ್ಕಳು ಏನು ಮಾಡಬೇಕು ಎಂಬ ಭಯ ಬೇಡ. ಮುಂದಿನ ದಿನಗಳಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ದೊರೆಯಲಿದೆ. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ.

ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾದಲ್ಲಿ ಏನು ಮಾಡಬೇಕು? ಯಾವ ಆಹಾರ ಸೇವಿಸಬೇಕು?

ನಾವು ತೆಗೆದುಕೊಳ್ಳುವ ಆಹಾರ ಉತ್ಪನ್ನಗಳಲ್ಲೇ ಈ ರೋಗನಿರೋಧಕ ಶಕ್ತಿ ಹೆಚ್ಚಿದೆ. ಆದರೆ, ಉತ್ತಮ ಮತ್ತು ಡಯಟ್ ಆಹಾರಗಳನ್ನು ಸೇವಿಸಬೇಕು. ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ದೊರೆಯುವ ಉತ್ಪನ್ನಗಳನ್ನೇ ಸೇವಿಸುವುದು ಒಳಿತು. ಸೊಪ್ಪು, ತರಕಾರಿ ಹೆಚ್ಚಾಗಿ ಸೇವನೆ ಮಾಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಅಸ್ತಮಾ ರೋಗಿಗಳಲ್ಲಿ ನ್ಯುಮೊನಿಯಾ ಹೆಚ್ಚಾಗಿ ಕಾಡುತ್ತದೆಯೇ?

ಅಸ್ತಮಾ ಅಲರ್ಜಿಯಿಂದ ಬರುತ್ತದೆ. ಚಳಿಗಾಲದಲ್ಲಿ ಅಸ್ತಮಾ ಹೆಚ್ಚಾಗುತ್ತದೆ. ಆದರೆ, ನ್ಯುಮೊನಿಯಾ ಶೀತ, ಜ್ವರ, ಕೆಮ್ಮಿನಿಂದ ಬರುತ್ತದೆ. ಅಸ್ತಮಾ ರೋಗಿಗಳಿಗೆ ನ್ಯುಮೊನಿಯಾ ಸಾಮಾನ್ಯವಾಗಿ ಕಾಡುತ್ತದೆ. ಇದಕ್ಕಾಗಿಯೇ ವಯೋಮಿತಿ ಆಧಾರದ ಮೇಲೆ ಲಸಿಕೆ ನೀಡುತ್ತಿದ್ದೇವೆ. ಇದನ್ನು ಪಡೆದುಕೊಳ್ಳಬೇಕು.

ಮೊಸರು ಸೇವಿಸುವುದರಿಂದ ನ್ಯುಮೊನಿಯಾ ಬರುತ್ತದೆಯೇ?

ಇದು ತಪ್ಪುಕಲ್ಪನೆ. ಮೊಸರನ್ನು ರೆಫ್ರಿಜರೇಟರ್​ನಲ್ಲಿಟ್ಟು ಆನಂತರ ಸೇವನೆ ಮಾಡುವುದರಿಂದ ಕಫ ಕಟ್ಟುವ ಸಾಧ್ಯತೆ ಹೆಚ್ಚು. ಫ್ರಿಡ್ಜ್​ನಲ್ಲಿಡುವ ವಸ್ತುಗಳು ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳವಣಿಗೆಗೆ ಸಹಕಾರಿಯಾಗಿರುವುದರಿಂದ ಆಹಾರ ಅಥವಾ ಮೊಸರು ಫ್ರಿಡ್ಜ್​ನಲ್ಲಿಟ್ಟು ಸೇವನೆ ಮಾಡಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net