

ಜಿನಿವಾ: ಕರೊನಾ ವೈರಸ್ ಸೋಂಕು ನಿಭಾಯಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿ ನಿಂತಿದ್ದು, ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತಿಗೆ ಪರೋಕ್ಷವಾಗಿ ತೀಕ್ಷ್ಮ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಮುಖ್ಯಸ್ಥ ಡಾ. ಟೆಡ್ರೋಸ್ ಅಧಾನೊಮ್ ಘೆಬ್ರೆಯೇಸಸ್, ‘ಕೊರೋನಾ ವೈರಸ್ ಸೋಂಕನ್ನು ರಾಜಕೀಯ ಟೀಕೆಗಳಿಗೆ ಬಳಸಬೇಡಿ. ಕರೊನಾ ವಿರುದ್ಧ ಹೇಳಿಕೆ ನೀಡುವ ಮೂಲಕ ಅದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ಬೆಂಕಿಯ ಜತೆ ಸರಸವಾಡಿದಂತೆ’ ಎಂದು ಎಚ್ಚರಿಸಿದ್ದಾರೆ.
ಈ ಸೋಂಕನ್ನು ನಿವಾರಿಸಲು ವಿಶ್ವದ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಸಂದರ್ಭವಿದು. ಇಂಥ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು, ಪರಸ್ಪರ ದೂಷಣೆಯಲ್ಲಿ ತೊಡಗುವುದು ಉಚಿತವಲ್ಲ. ಬೆಂಕಿಯ ಜತೆ ಸರಸವಾಡಿದರೆ ಪರಿಣಾಮ ಕೆಟ್ಟದ್ದಾಗಿರುತ್ತದೆ’ ಎಂದಿದ್ದಾರೆ.
ಅಮೆರಿಕ ಮತ್ತು ಚೀನಾ ದೇಶಗಳು ಒಗ್ಗಟ್ಟಿನಿಂದ ಕರೊನಾ ವೈರಸ್ ವಿರುದ್ಧ ಹೋರಾಡಬೇಕಾದ ಅವಶ್ಯಕತೆ ಇದೆ. ವಿಶ್ವ ಆರೋಗ್ಯ ಸಂಸ್ಥೆ ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿದೆ. ಯಾವ ದೇಶದ ಪರವೂ ಕೆಲಸ ನಿರ್ವಹಿಸುತ್ತಿಲ್ಲ. ಪಕ್ಷಪಾತ ಧೋರಣೆ ಅನುಸರಿಸುತ್ತಿಲ್ಲ. ವಿಶ್ವದ ಎಲ್ಲಾ ದೇಶಗಳ ರಾಜಕೀಯ ಪಕ್ಷಗಳ ಗಮನ ಜನರ ಸುರಕ್ಷತೆ ಆಗಬೇಕು. ವೈರಸ್ ವಿಷಯದಲ್ಲಿ ರಾಜಕೀಯ ಮಾಡಿ ಸಮಯ ಹಾಳು ಮಾಡಬೇಡಿ’ ಎಂದಿದ್ದಾರೆ.‘ವಿಶ್ವಸಂಸ್ಥೆಯಿಂದ ಹೆಚ್ಚಿನ ಅನುದಾನ, ಸಹಕಾರ ಬೇಕಾದರೆ ಕೇಳಿ. ಅದರ ಬದಲು ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಡಿ. ಇದು ಉಚಿತವಾದ ಕ್ರಮವಲ್ಲ’ ಎಂದು ಕಟುವಾಗಿ ಟೆಡ್ರೋಸ್ ನುಡಿದಿದ್ದಾರೆ. (ಏಜನ್ಸೀಸ್)