Life Partner: ಮದುವೆಗೂ ಮುನ್ನ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವಾಗ ಈ 3 ತಪ್ಪುಗಳನ್ನು ಮಾಡ್ಬೇಡಿ!

Life Partner
Published on

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಚಾಣಕ್ಯ ನೀತಿಯಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ, ಮದುವೆಗೂ ಮುನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ 3 ವಿಚಾರಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಮದುವೆಗೂ ಮೊದಲೇ ಸಂಗಾತಿ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಯಾವುವು ಎಂಬುದನ್ನು ಈ ಪೋಸ್ಟ್​ನಲ್ಲಿ ನಾವು ತಿಳಿದುಕೊಳ್ಳೋಣ..

1. ಸಂಗಾತಿಯ ವಯಸ್ಸು: ಚಾಣಕ್ಯನ ನೀತಿ ಪ್ರಕಾರ ಜೀವನ ಸಂಗಾತಿಯ ವಯಸ್ಸನ್ನು ಮದುವೆಗೆ ಮೊದಲು ಖಚಿತಪಡಿಸಿಕೊಳ್ಳಬೇಕು. ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ದೊಡ್ಡ ವಯಸ್ಸಿನ ವ್ಯತ್ಯಾಸವಿದ್ದರೆ, ಜೀವನದ ಹಲವು ಅಂಶಗಳ ಬಗ್ಗೆ ಇಬ್ಬರೂ ವಿಭಿನ್ನ ಅಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ಸಂತೋಷದ ದಾಂಪತ್ಯ ಜೀವನಕ್ಕಾಗಿ ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸವು ದೊಡ್ಡದಾಗಿರಬಾರದು ಎಂದು ಚಾಣಕ್ಯ ಸೂಚಿಸುತ್ತಾನೆ. ಏಕೆಂದರೆ ವಯಸ್ಸು ತಿಳುವಳಿಕೆಯ ಮೇಲೆ ಬಲವಾದ ಪ್ರಭಾವ ಬೀರುತ್ತದೆ.

2. ಆರೋಗ್ಯ: ಚಾಣಕ್ಯನ ನೀತಿ ಪ್ರಕಾರ ಮದುವೆಗೂ ಮುನ್ನ ಸಂಗಾತಿಯ ಆರೋಗ್ಯದ ಬಗ್ಗೆ ಖಂಡಿತವಾಗಿ ತಿಳಿದುಕೊಳ್ಳಬೇಕು. ಸಂಗಾತಿಗೆ ಯಾವುದಾದರು ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿವೆಯೇ ಎಂಬುದನ್ನು ತಿಳಿಯಬೇಕು. ಏಕೆಂದರೆ, ಸಂಗಾತಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರನ್ನು ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಆದ್ದರಿಂದ, ನೀವು ಈ ವಿಷಯದ ಬಗ್ಗೆ ತಿಳಿದಿರಬೇಕು. ಗಂಭೀರ ಕಾಯಿಲೆ ಇರುವವರನ್ನು ನಿಮ್ಮ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರೆ ನೀವು ವಿವಿಧ ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಚಾಣಕ್ಯ ಎಚ್ಚರಿಸಿದ್ದಾರೆ.

ಹಳೆಯ ಸಂಬಂಧ: ಚಾಣಕ್ಯನ ನೀತಿ ಪ್ರಕಾರ ಸಂಗಾತಿಯ ಹಳೆಯ ಸಂಬಂಧಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು. ಈ ಹಿಂದೆ ಸಂಬಂಧ ಹೊಂದಿರುವ ಯಾರನ್ನಾದರೂ ಮದುವೆಯಾಗುವುದು ನಿಮ್ಮ ಜೀವನದ ಮೇಲೆ ಬಲವಾದ ಪ್ರಭಾವ ಬೀರಬಹುದು. ಸಂಗಾತಿಯು ಹಿಂದಿನ ಸಂಬಂಧವನ್ನು ಬಿಟ್ಟು ಹೊಸ ಜೀವನವನ್ನು ಪ್ರಾರಂಭಿಸಲು ಸಿದ್ಧವಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಈ ವಿಚಾರ ತಿಳಿಯದೇ ಮದುವೆಯಾಗುವುದರಿಂದ ಇಬ್ಬರ ಜೀವನದಲ್ಲಿ ಕೆಟ್ಟ ದಿನಗಳು ಎದುರಾಗುತ್ತವೆ ಎಂದು ಚಾಣಕ್ಯ ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net