

ಹುಣಸೂರು: ಮಕ್ಕಳ ಭವಿಷ್ಯ ರೂಪಿಸಬೇಕಾದ ಜವಾಬ್ದಾರಿ ಪಾಲಕರ ಮೇಲಿದ್ದು, ಅವರನ್ನು ಬಾಲಕಾರ್ಮಿಕರನ್ನಾಗಿ ಮಾಡಬೇಡಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ಮನವಿ ಮಾಡಿದರು.
ಕಾರ್ಮಿಕ ಇಲಾಖೆ ಮತ್ತು ನಗರಸಭೆ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ವಿರೋಧಿ ಅರಿವು ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, 14 ವರ್ಷದೊಳಗಿನ ಮಕ್ಕಳನ್ನು ಉದ್ಯೋಗ ಮತ್ತು 14ರಿಂದ 18ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸುವುದನ್ನು ಸರ್ಕಾರ ನಿಷೇಧಿಸಿದೆ. ಆದರೂ ಪಾಲಕರು ತಮ್ಮ ಆರ್ಥಿಕ ಬಲಹೀನತೆಯನ್ನೇ ಕಾರಣವನ್ನಾಗಿಸಿಕೊಂಡು ಮಕ್ಕಳ ಬಾಲ್ಯ ಮತ್ತು ವಿದ್ಯಾಭ್ಯಾಸವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳನ್ನು ಉತ್ತಮ, ಸಂಸ್ಕಾರಯುತ ಪ್ರಜೆಗಳನ್ನಾಗಿಸುವ ಹೊಣೆ ಪಾಲಕರು ಮತ್ತು ಸಮಾಜದ ಮೇಲಿದೆ. ತಾಲೂಕಿನಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಅಂತಹವರನ್ನು ಪತ್ತೆಹಚ್ಚಿ ಅವರನ್ನು ಶಾಲೆಗೆ ಕಳುಹಿಸುವ ಕಾರ್ಯವನ್ನು ಇಲಾಖೆ ಮಾಡಲಿ ಎಂದರು.
ಕಾರ್ಮಿಕ ಇಲಾಖೆ ನಿರೀಕ್ಷಕಿ ಹೇಮಲತಾ ಮಾತನಾಡಿ, ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಉದ್ದಿಮೆಯಲ್ಲಿ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡ ಮಾಲೀಕರಿಗೆ 6 ತಿಂಗಳಿನಿಂದ 2ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ವಿಧಿಸಬಹುದಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಮಂಜುನಾಥ್, ತಹಸೀಲ್ದಾರ್ ಐ.ಇ.ಬಸವರಾಜ, ನಗರಸಭಾ ಸದಸ್ಯ ಸ್ವಾಮಿಗೌಡ, ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ಇತರರಿದ್ದರು.