ಮಕ್ಕಳಲ್ಲಿ ಅಹಂಕಾರ ಬೆಳೆಯಲು ಬಿಡಬೇಡಿ

sdm
ಮಾರಶೆಟ್ಟಿಹಳ್ಳಿಯಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯನ್ನು ಗ್ರಾಪಂ ಅಧ್ಯಕ್ಷ ಕಿರಣ್ ಮೋರೆ ಉದ್ಘಾಟಿಸಿದರು. ಗೀತಾ, ಡಾ. ಹರಿಣಾಕ್ಷಿ, ಪಾಲಾಕ್ಷಪ್ಪ, ಅನಸೂಯಮ್ಮ ಇತರರಿದ್ದರು.
Published on

ಹೊಳೆಹೊನ್ನೂರು: ಮಕ್ಕಳು ಪ್ರತಿಯೊಂದು ಮನೆಗಳ ಸಂಸ್ಕೃತಿಯ ರಾಯಭಾರಿಗಳಾಗಿರುತ್ತಾರೆ ಎಂದು ನ್ಯೂ ಟೌನ್ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರಾಚಾರ್ಯೆ ಡಾ. ಹರಿಣಾಕ್ಷಿ ಹೇಳಿದರು.

ಸಮೀಪದ ಮಾರಶೆಟ್ಟಿಹಳ್ಳಿಯ ಛತ್ರಪತಿ ಶಿವಾಜಿ ಸಮುದಾಯ ಭವನದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
ತಾಯಂದಿರು ಹೆಣ್ಣು ಮಕ್ಕಳಲ್ಲಿ ಸೂಕ್ಷ್ಮ ಅರಿವು ಬೆಳೆಸಬೇಕು. ಮಕ್ಕಳನ್ನು 18 ವರ್ಷಗಳವರೆಗೆ ಒಂಟಿಯಾಗಿ ಬಿಡಬಾರದು. ಆಧುನಿಕ ಜಗತ್ತಿನಲ್ಲಿ ತಾಯಂದಿರು ಎಷ್ಟು ಜಾಣೆಯರಾಗಿದ್ದರೂ ಕಡಿಮೆ. ಮಕ್ಕಳನ್ನು ಪ್ರೀತಿಯಿಂದ ಬೆಳೆಸುವ ಜತೆಗೆ ಮನೆಗಳಲ್ಲಿ ಸಣ್ಣಪುಟ್ಟ ಕೆಲಸವನ್ನೂ ಮಾಡಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಜೀವನ ಕೌಶಲಗಳನ್ನು ರೂಢಿಸಬೇಕು. ಓದಿನೊಂದಿಗೆ ಆಟೋಟಗಳಿಗೆ ಒತ್ತು ನೀಡಬೇಕು. ಮಕ್ಕಳನ್ನು ಬೇಗ ಮಲಗಿಸಿ ಬೇಗ ಏಳಿಸಬೇಕು. ಪೂಜೆ ಮಾಡುವ ಸಂಸ್ಕಾರ ಬೆಳೆಸಬೇಕು. ತಪ್ಪು ಮಾಡಿದಾಗ ಶಿಕ್ಷಿಸಬೇಕು. ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು. ಅಹಂಕಾರ ಬೆಳೆಯಲು ಬಿಡಬಾರದು. ಮಗುವಿಗೆ ಅಗತ್ಯ ಇರುವುದನ್ನು ಮಾತ್ರ ಕೊಡಿಸಿ ಎಂದು ತಿಳಿಸಿದರು.
ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಜವಾಬ್ದಾರಿಯ ಸೌಂದರ್ಯ ಹೆಚ್ಚಾಗಬೇಕು. ಆಕರ್ಷಣೆಗಳಿಗೆ ಒಳಗಾಗಿ ಸ್ವಂತಿಕೆಯನ್ನು ಕಳೆದುಕೊಳ್ಳಬಾರದು. ಕುಟುಂಬ ನೀಡಿರುವ ಸ್ವಾತಂತ್ರೃವನ್ನು ಬಳಸಿಕೊಂಡು ಉತ್ತಮ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು. ತಾಯಿ ದಾರಿ ತಪ್ಪಿದರೆ ಕುಟುಂಬ ಅವನತಿಯತ್ತ ಸಾಗುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯರ ಸಮಯ ಮೊಬೈಲ್ ಸೇರಿ ಧಾರಾವಾಹಿಗಳ ಪಾಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಗ್ರಾಪಂ ಅಧ್ಯಕ್ಷ ಕಿರಣ್ ಮೋರೆ, ಒಕ್ಕೂಟದ ಅಧ್ಯಕ್ಷೆ ಅನಸೂಯಮ್ಮ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ.ಪಾಲಾಕ್ಷಪ್ಪ, ಕ್ಷೇತ್ರ ಯೋಜನಾಧಿಕಾರಿ ಅಜಯ್‌ಕುಮಾರ್, ವಲಯ ಮೇಲ್ವಿಚಾರಕ ಮಂಜುನಾಥ್, ಸೇವಾ ಪ್ರತಿನಿಧಿ ಶಶಿಕುಮಾರ್, ಅನಿತಾ ಕುಮಾರ್, ಸೌಮ್ಯಾ, ಅಶೋಕ್ ರಾವ್, ಮಧು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net