

ಬೆಂಗಳೂರು: ರೈತರಿಂದ ಖರೀದಿಸಿದ ಹಾಲಿನ ಬಾಕಿ ಹಣ ಪಾವತಿಸಲು ಮೀನಮೇಷ ಎಣಿಸುತ್ತಿರುವ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಬಡವರು ಹಾಗೂ ರೈತರಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ರೈತರು ದೂರು ನೀಡಿಲ್ಲ ಎಂಬ ಕಾರಣಕ್ಕೆ ಅದರ ಅನುಕೂಲ ಪಡೆಯಬೇಡಿ ಎಂದು ಎಚ್ಚರಿಸಿದೆ.
ಬೆಂಗಳೂರಿನ ಆಕಾಶ್ ಅಗರ್ವಾಲ್ ಮತ್ತು ಇಬ್ರಾಹಿಂ ಅಲಿ ಅನ್ಸರ್ ವಿರುದ್ಧದ ವಂಚನೆ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಿರಾಕರಿಸಿದೆ. ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ಮುಕ್ತಗೊಳಿಸಲು ಕೋರಿ ಅರ್ಜಿ ಸಲ್ಲಿಸಬಹುದು. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ ಎಂದು ಆದೇಶಿಸಿತು.
ಅರ್ಜಿದಾರರ ಪರ ವಕೀಲರು, ರೈತರಿಂದ ಹಾಲು ಖರೀದಿಸಲಾಗಿದೆ ಎಂದು ದೂರು ಅಥವಾ ಆರೋಪ ಪಟ್ಟಿಯಲ್ಲಿ ಹೇಳಲಾಗಿಲ್ಲ. ಕಂಪನಿಯು ದಿವಾಳಿಯಾಗಿದ್ದು, ಈ ಸಂಬಂಧದ ಪ್ರಕರಣ ಎನ್‌ಸಿಎಲ್‌ಟಿಯಲ್ಲಿ ಬಾಕಿ ಇದೆ. ನಾವು ನೀಡಿದ್ದ ಚೆಕ್ ಬೌನ್ಸ್ ಆಗಿರುವುದರಿಂದ ಹಾಲಿ ನಮ್ಮ ವಿರುದ್ಧ ವಂಚನೆ ಪ್ರ
ಕರಣ ದಾಖಲಿಸಲಾಗಿದೆ. ಇಲ್ಲಿ ರೈತರು ದೂರುದಾರರಲ್ಲ. ಪ್ರಕರಣ ರದ್ದುಪಡಿಸಬೇಕು ಎಂದರು.
ದೂರುದಾರರ ಪರ ವಕೀಲರು, ಬ್ಯಾಂಗರ್ ಟೆಕ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರು ರೈತರಿಗೆ ಪಾವತಿಸಬೇಕಾದ 17 ಲಕ್ಷ ರೂಪಾಯಿ ಕುರಿತು ಇಮೇಲ್ ಕಳುಹಿಸಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಇದೆಲ್ಲವನ್ನೂ ಆಲಿಸಿದ ಪೀಠವು ರೈತರಿಗೆ ಬಾಕಿ ಪಾವತಿಯಾಗಬೇಕಿರುವ ಪ್ರಕರಣದಲ್ಲಿ ವಂಚನೆ ಪ್ರಕರಣವನ್ನು ಖಂಡಿತವಾಗಿಯೂ ವಜಾ ಮಾಡುವುದಿಲ್ಲ. ಬಡ ವ್ಯಕ್ತಿ ಅಥವಾ ರೈತರಿಗೆ ಅನ್ಯಾಯವಾಗುವುದಕ್ಕೆ ಅನುಮತಿಸುವುದಿಲ್ಲ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 420 ಖಂಡಿತಾ ಅನ್ವಯಿಸುವುದಿಲ್ಲ. ಆದರೂ ಅರ್ಜಿಯನ್ನು ವಜಾ ಮಾಡುತ್ತೇನೆ.
ರೈತರಿಗೆ ಅನ್ಯಾಯ ಮಾಡಬೇಡಿ. ಇದು ಎರಡು ಮೂರು ಕೋಟಿ ರೂಪಾಯಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣವಾಗಿದ್ದರೆ ಖಂಡಿತಾ ವಜಾ ಮಾಡುತ್ತಿದ್ದೆ. ದೊಡ್ಡ ವ್ಯಕ್ತಿಗಳು ದಾವೆ ನಡೆಸಲು ಸಮರ್ಥರಾಗಿರುತ್ತಾರೆ. ಆದರೆ, ಈ ಜನರಿಂದ ಅದು ಸಾಧ್ಯವಾಗುವುದಿಲ್ಲ. ಯಾಕೆ ರೈತರು ದೂರು ನೀಡಿಲ್ಲ ಅಂದರೆ ಅದನ್ನು ಅವರಿಂದ ನಡೆಸಲಾಗದು. ರೈತರು ದೂರು ನೀಡಿಲ್ಲ ಎಂಬುದರ ಅನುಕೂಲ ಪಡೆಯಬೇಡಿ ಎಂದು ಅರ್ಜಿದಾರರಿಗೆ ಬಿಸಿ ಮುಟ್ಟಿಸಿತು.
ನ್ಯಾಯಾಲಯದ ಮೆಟ್ಟಿಲೇರಲಾಗದ ವ್ಯಕ್ತಿಯು ಕಂಪನಿಯ ವಿರುದ್ಧ ದಾವೆ ಹೂಡಲಾಗದು. ಏಕೆಂದರೆ ದಾವೆಯನ್ನು ನಡೆಸುವ ಶಕ್ತಿ ಅವರಿಗೆ ಇರುವುದಿಲ್ಲ. ಇಲ್ಲಿ ಕಂಪೆನಿ ಮುಂದೆ ಬಂದಿದೆ. ರೈತರಿಂದ ಹಾಲು ಖರೀದಿಸಿರುವುದರಿಂದ ಅವರಿಗೆ ಹಣ ಪಾವತಿಸಬಾರದೇ? ಹಾಲು ಆಕಾಶದಿಂದ ಬರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮೌಖಿಕವಾಗಿ ಪೀಠವು ಅತೃಪ್ತಿ ವ್ಯಕ್ತಪಡಿಸಿತು.