ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ, ಬಾಡಿಗೆದಾರರನ್ನು ಹೊರ ಕಳಿಸದಂತೆ ಸರ್ಕಾರದ ಮನವಿ

Employees 22 April 20
Published on

ಬೆಂಗಳೂರು: ಉದ್ಯೋಗದಾತರು ಕರೊನಾ ಕರ್ಫ್ಯೂ ಅವಧಿಯಲ್ಲಿ ಉದ್ಯೋಗಸ್ಥರನ್ನು ಕೆಲಸದಿಂದ ತೆಗೆಯದಂತೆ ಮತ್ತು ವೇತನವನ್ನೂ ಕಡಿತ ಮಾಡದಂತೆ ಸರ್ಕಾರ ಮನವಿ ಮಾಡಿದೆ.

ರಾಜ್ಯದಲ್ಲಿ ಕರೊನಾ ಪ್ರಕರಣ ಸಂಖ್ಯೆ ಏರುಗತಿಯಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪ್ರಸರಣದ ಸರಪಳಿ ತುಂಡರಿಸಲು ಅತ್ಯಂತ ಕಠಿಣ ನಿರ್ಬಂಧ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಇಂತಹ ದುಸ್ಥ್ಥಿತಿಯಲ್ಲಿ ಹಲವು ಭೂ ಮಾಲಿಕರು, ಮನೆ, ವಸತಿಗೃಹ, ಪಿಜಿ, ಅಂಗಡಿ ಮಾಲಿಕರು ಬಾಡಿಗೆ ಮತ್ತು ಭೋಗ್ಯದ ಆಧಾರದ ಮೇಲೆ ನೀಡಿರುವ ಸ್ಥಳಗಳನ್ನು ಬಾಡಿಗೆದಾರರಿಂದ ತೆರವುಗೊಳಿಸುತ್ತಿದ್ದಾರೆ, ಇದು ಸರ್ಕಾರದ ಗಮನಕ್ಕೂ ಬಂದಿದೆ ಎಂದು ಪ್ರಸ್ತಾಪಿಸಿದೆ.

ಮಂಗಳವಾರದಿಂದ 14 ದಿನಗಳವರೆಗೆ ಕರೊನಾ ಕರ್ಫ್ಯೂ ಜಾರಿಯಲ್ಲಿದ್ದು, ಬಹುತೇಕ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಉದ್ಯೋಗದಾತರು ತನ್ನ ಉದ್ಯೋಗಸ್ಥರನ್ನು ಕೆಲಸದಿಂದ ವಜಾಗೊಳಿಸಬಾರದು ಮತ್ತು ವೇತನ ಕಡಿತ ಮಾಡದಂತೆ ಮನವಿ ಮಾಡಿದೆ.

ಇದೇ ರೀತಿ ಕಟ್ಟಡ ಮಾಲೀಕರು ಅಂಗಡಿ ಮತ್ತು ಇತರ ಚಟುವಟಿಕೆಗಳನ್ನು ನಡೆಸುವ ಬಾಡಿಗೆಯವರನ್ನು ತೆರವುಗೊಳಿಸುವುದು ಸಹ ಗಮನಕ್ಕೆ ಬಂದಿದೆ. ಮನೆ ಅಥವಾ ಕಟ್ಟಡ ಮಾಲೀಕರು ಬಾಡಿಗೆದಾರರನ್ನು, ಪಿಜಿಯಲ್ಲಿರುವವರನ್ನು ವಾಸದಿಂದ ಬಲವಂತವಾಗಿ ಹೊರಕಳಿಸದಂತೆಯೂ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net