ಎನ್‌ಪಿಕೆಎಲ್ ಸೈಟ್‌ದಾರರಿಗೆ ಆಸ್ತಿತೆರಿಗೆ ವಿಧಿಸದಿರಿ: ಡಿಸಿಎಂಗೆ ಶಾಸಕ ಸುರೇಶ್‌ಕುಮಾರ್ ಪತ್ರ

bda office
Published on

ಬೆಂಗಳೂರು: ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್) ಯಲ್ಲಿನ ಸೈಟ್‌ದಾರರಿಗೆ ವಿಧಿಸಿರುವ ಆಸ್ತಿತೆರಿಗೆಯನ್ನು ಮೂಲಸೌಕರ್ಯ ಕಲ್ಪಿಸುವವರೆಗೂ ವಸೂಲು ಮಾಡಬಾರದು ಎಂದು ಕೋರಿ ಶಾಸಕ ಎಸ್.ಸುರೇಶ್‌ಕುಮಾರ್ ಅವರು ಡಿಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಇತ್ತೀಚಿಗೆ ಬಿಡಿಎ ಆಸ್ತಿತೆರಿಗೆ ಪರಿಷ್ಕರಿಸುವಾಗ ಶೇ.50ರವರೆಗೂ ಹೆಚ್ಚಳ ಮಾಡಿದೆ. ಅದರಲ್ಲೂ ಕೆಂಪೇಗೌಡ ಲೇಔಟ್‌ನಲ್ಲಿ ರಸ್ತೆ ಸೇರಿದಂತೆ ಯಾವ ಸೌಲಭ್ಯವನ್ನೂ ಪೂರ್ಣವಾಗಿ ಕಲ್ಪಿಸಿಲ್ಲ. ಇದರಿಂದಾಗಿ ಸೈಟ್ ಹಂಚಿಕೆದಾರರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಖಾಲಿ ಸೈಟ್‌ಗಳಿಗೂ ಯದ್ವಾತದ್ವಾ ಶುಲ್ಕ ಏರಿಸಿರುವುದು ಸರಿಯಲ್ಲ. ಹಾಗಾಗಿ ಬಡಾವಣೆಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಸೈಟ್‌ದಾರರಿಗೆ ಅಂತಿಮ ಮಾಲೀಕತ್ವ ಪ್ರಮಾಣಪತ್ರ ವಿತರಿಸುವವರೆಗೂ ತೆರಿಗೆ ಶುಲ್ಕ ವಿಧಿಸಬಾರದು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಕೆಂಪೇಗೌಡ ಲೇಔಟ್ ವಿಚಾರವಾಗಿ ವಿಧಾನಸಭೆಯ ಅರ್ಜಿ ಸಮಿತಿಗೆ ದಾಖಲಾಗಿರುವ ದೂರು ಆಧರಿಸಿ ವಿಚಾರಣೆ ನಡೆಸಿದ್ದರೂ, ಪ್ರಾಧಿಕಾರಿವು ಸರಿಯಾದ ಉತ್ತರ ಒದಗಿಸಿಲ್ಲ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಸಿದ್ದರೂ, ಸಮರ್ಪಕ ಮಾಹಿತಿ ದೊಎತಿಲ್ಲ. ತಮಗು (ಡಿಸಿಎಂ) ಕೂಡ ಎರಡು ಬಾರಿ ಪತ್ರ ಬರೆದಿದ್ದರೂ ಈವರೆಗೂ ಮಾರುತ್ತರ ನೀಡಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಮೇಲ್ಮನವಿ ಹಕ್ಕು ಉಲ್ಲಂಘನೆ:

ಬಿಡಿಎ ಕಾಯ್ದೆ ಅನ್ವಯ ಕಲಂ 62 ಎ(1) ಅನ್ವಯ ತೆರಿಗೆ ನಿರ್ಧರಣೆ ಸಂಬಂಧ ಬಾಧಿತ ವ್ಯಕ್ತಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಆದರೆ, ಇದಕ್ಕೆ ಪ್ರಾಧಿಕಾರ ಅವಕಾಶ ಮಾಡಿಕೊಡದೆ ಏಕಾಏಕಿ ಶುಲ್ಕ ಪರಿಷ್ಕರಿಸಿ ನೇರವಾಗಿ ಪಾವತಿಸಿಕೊಳ್ಳುತ್ತಿದೆ. ಮೇಲ್ಮನವಿಗೆ ಅವಕಾಶ ನೀಡದೆ ತೆರಿಗೆ ವಸೂಲು ಮಾಡಿದರೆ ಬಲವಂತದ ಕ್ರಮವಾಗುತ್ತದೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net