ಮಹಾಮಾರಿ ಕೊರೊನಾ ವೈರಸ್​: ವದಂತಿಗೆ ಕಿವಿಗೊಡಬೇಡಿ

Corona
Published on

ಕರೊನಾ ವೈರಸ್​ಗೆ ಔಷಧ ಲಭ್ಯವಿದೆ, ಪ್ರತ್ಯೇಕ ಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ ಎಂಬಿತ್ಯಾದಿ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕರೊನಾ ವೈರಸ್​ಗೆ ಔಷಧ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಅದೇ ರೀತಿ ನಗರದ ಯಲಹಂಕದ ಬಿಎಸ್​ಎಫ್ ಕೇಂದ್ರದಲ್ಲಿ ಕರೊನಾ ಶಂಕಿತರಿಗೆ ಚಿಕಿತ್ಸೆ ನೀಡಲು ಶಿಬಿರ ತೆರೆಯಲಾಗಿದೆ ಎಂಬುದೆಲ್ಲ ಸುಳ್ಳು ಸುದ್ದಿ. ಇದಕ್ಕೆ ಜನರು ಕಿವಿಗೊಡಬಾರದು. ಹಾಗೇನಾದರೂ ಇಂತಹ ವ್ಯವಸ್ಥೆಗಳನ್ನು ಮಾಡಿದ್ದಲ್ಲಿ ಇಲಾಖೆಯಿಂದಲೇ ಮಾಹಿತಿ ನೀಡಲಾಗುವುದು. ರಾಜ್ಯದಲ್ಲಿ ಆತಂಕ ಪಡಬೇಕಾದ ಯಾವುದೇ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದು ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಜಿ. ಪ್ರಕಾಶ್ ಕುಮಾರ್ ತಿಳಿಸಿದ್ದಾರೆ. ಕರೊನಾ ಸೋಂಕಿತ ದೇಶಗಳಿಂದ ರಾಜ್ಯಕ್ಕೆ ಈವರೆಗೂ 20, 385 ಮಂದಿ ಆಗಮಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರೆಲ್ಲರನ್ನೂ ಥರ್ಮಲ್ ಸ್ಕಾ್ಯನರ್ ಮೂಲಕ ತಪಾಸಣೆಗೆ ಒಳಪಡಿಸಲಾಗಿದೆ.

147 ಶಂಕಿತರಲ್ಲಿ 142 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರಲ್ಲಿ 136 ಮಂದಿಯ ವರದಿ ಬಂದಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಇವರಲ್ಲಿ ಈಗಾಗಲೇ 15 ಮಂದಿ 28 ದಿನಗಳ ನಿಗಾದಲ್ಲಿದ್ದು, ಯಾವುದೇ ಸಮಸ್ಯೆಯಿಲ್ಲದೆ ಹೊರಬಂದಿದ್ದಾರೆ. ಉಳಿದವರು ನಗರದ ನಾನಾ ಭಾಗಗಳಲ್ಲಿ ಮನೆಗಳಲ್ಲಿದ್ದು, ಅವರ ಕುರಿತು ಆರೋಗ್ಯ ಕಾರ್ಯಕರ್ತರು ಕಾಲ ಕಾಲಕ್ಕೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net