ಗಂಡಿನ ವೀರ್ಯದಲ್ಲಿ ಕರೊನಾ: ಒಂದು ತಿಂಗಳು ಸೆಕ್ಸ್​ ಮಾಡ್ದಿದ್ರೆ ಒಳಿತು, ಇಲ್ಲದಿದ್ರೆ...!

Intercourse
Published on

ನವದೆಹಲಿ: ಮಹಾಮಾರಿ ಕರೊನಾ ವೈರಸ್​ನಿಂದ ಗುಣಮುಖರಾದವರು 30 ದಿನಗಳವರೆಗೆ ಲೈಂಗಿಕ ಕ್ರಿಯೆಯಿಂದ ದೂರವಿದ್ದರೆ ಒಳ್ಳೆಯದು. ಪರಸ್ಪರ ಸಂಭೋಗದಿಂದಲೂ ವೈರಸ್​ ಹರಡುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಪರಿಣಿತರು ಸಲಹೆ ನೀಡಿದ್ದಾರೆ.

ಮಾನವನ ವೀರ್ಯದಲ್ಲಿ ಕೋವಿಡ್​ -19 ಪತ್ತೆಯಾಗಿರುವುದು ಈ ಕಳವಳಕ್ಕೆ ಕಾರಣವಾಗಿದೆ. ಇದೀಗ ರೋಗ ನಿಯಂತ್ರಣ ವಿಭಾಗದ ವೈದ್ಯಕೀಯ ಪರಿಣಿತರು ಯಾವುದೇ ಕಾರಣಕ್ಕೂ ತಮ್ಮ ಜತೆಗಾತಿ ಅಥವಾ ಜತೆಗಾರರೊಂದಿಗೆ ಸೇರಬಾರದೆಂದು ಎಚ್ಚರಿಸಿದ್ದಾರೆ.

ವೀರ್ಯವು ವೈರಸ್​ ರವಾನೆ ಮಾಡುವ ಸಾಧ್ಯತೆಯಿದ್ದು, ಸಂಭೋಗ ನಡೆಸುವುದು ಮತ್ತು ಪರಸ್ಪರ ಚುಂಬಿಸುವುದನ್ನು ಮಾಡುವುದರಿಂದ ಸೋಂಕಿಗೆ ಒಳಗಾಗಬಹುದೆಂದು ಚೀನಾದ ಅಧ್ಯಯನವನ್ನು ಉಲ್ಲೇಖಿಸಿ ವೈದ್ಯಕೀಯ ಪರಿಣಿತರಾದ ವೀರಾವತ್ ಮನೊಸುತ್ಥಿ ಎಂಬುವರು ಎಚ್ಚರಿಸಿದ್ದಾರೆ. ಹೀಗಾಗಿ ಒಂದು ತಿಂಗಳ ಬಳಿಕ ಮರಳಿ ಸಂಭೋಗದಲ್ಲಿ ತೊಡಗಬಹುದು, ಅಲ್ಲಿಯವರೆಗೆ ಅದರಿಂದ ದೂರವಿದ್ದರೆ ಉತ್ತಮ ಎಂದು ಹೇಳಿದ್ದಾರೆ.

ಸೋಂಕಿತ 32 ರೋಗಿಗಳನ್ನು ಚೀನಾದ ವಿಜ್ಞಾನಿಗಳು ಪರೀಕ್ಷಿಸಿದ್ದು, ಅದರಲ್ಲಿ 23 ಮಂದಿ ಗುಣಮುಖರಾಗಿದ್ದು, 15 ಮಂದಿ ಇನ್ನು ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ಗುಣಮುಖರಾದ ಆರು ಪುರುಷರಲ್ಲಿ ಕರೊನಾ ವೈರಸ್​ಗೆ ಕಾರಣವಾಗುವ ಸಾರ್ಸ್-ಕೋವಿಡ್​ -2 ವೈರಾಣು ವೀರ್ಯದಲ್ಲಿ ಪತ್ತೆಯಾಗಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಆತಂಕಕಾರಿಯೆಂದರೆ ಮೊದಲು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಅವಧಿಯವರೆಗೂ ವೈರಸ್​ ಜೀವಂತವಾಗಿರಲಿದ್ದು, ಸೆಕ್ಸ್​ ಮೂಲಕವೂ ಹರಡಲಿದೆ ಎಂದು ಹೇಳಿದ್ದಾರೆ.

ಚೀನಾ ವೈದ್ಯ ಶಿಕ್ಷಿ ಝಾಂಗ್​ ಎಂಬುವರು ಜೆಎಎಂಎ ನೆಟ್​​ವರ್ಕ್​ ಜರ್ನಲ್​​ನಲ್ಲಿ ಈ ಬಗ್ಗೆ ಬರೆದಿದ್ದು, ಸಾರ್ಸ್-ಕೋವಿಡ್​ -2 ವೈರಾಣು ಗುಣಮುಖರಾದ ರೋಗಿಗಳ ವೀರ್ಯದಲ್ಲಿ ಜೀವಂತವಾಗಿರುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net