ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪಬೇಡಿ:ಎಸ್ಪಿ

dvs
ಡಿವಿಎಸ್ ಕಾಲೇಜಿನಲ್ಲಿ ಕಾನೂನು, ಅಪರಾಧ ಜಾಗೃತಿ ಕಾರ್ಯಕ್ರಮವನ್ನು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಿದರು. ರುದ್ರಪ್ಪಗೌಡ, ಎಸ್.ರಾಜಶೇಖರ್, ಅನಿಲ್‌ಕುಮಾರ್ ಭೂಮರಡ್ಡಿ, ಎ.ಇ.ರಾಜಶೇಖರ್, ದತ್ತಮೂರ್ತಿ ಭಟ್ ಇತರರಿದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿಗಳು ಕಾನೂನನ್ನು ಅರಿಯುವ ಮೂಲಕ ಸಮಾಜದ ಸ್ವಾಸ್ಥೃ ಕಾಪಾಡಬೇಕು. ನನಗೆ ಕಾನೂನು ಗೊತ್ತಿಲ್ಲ ಎಂದು ಅಪರಾಧ ಎಸಗಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಕಾನೂನು, ಅಪರಾಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅಮೂಲ್ಯ. ಇಲ್ಲಿ ದಾರಿ ತಪ್ಪಿದರೆ ಜೀವನ ಘೋರವಾಗುತ್ತದೆ. ಹದಿಹರೆಯದಲ್ಲಿ ಕೆಟ್ಟ ಅಲೋಚನೆಗಳು ಬೇಗ ಆವರಿಸಿಕೊಳ್ಳುತ್ತವೆ. ಈ ಬಗ್ಗೆ ಎಚ್ಚರವಿರಬೇಕು ಸಲಹೆ ನೀಡಿದರು.
ಇತ್ತೀಚಿನ ವರ್ಷಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಗಾಂಜಾಮುಕ್ತ ಜಿಲ್ಲೆಯನ್ನಾಗಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಕಾಲೇಜುಗಳ ಆವರಣ ಅಥವಾ ನಿಮ್ಮ ಸುತ್ತಮುತ್ತ ಗಾಂಜಾ ಬಳಕೆ ಅಥವಾ ಮಾರಾಟ ಕಂಡುಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಸೈಬರ್ ಅಪರಾಧಗಳು ಸಹ ಹೆಚ್ಚಾಗುತ್ತಿವೆ. ಮೊಬೈಲ್ ಇಂದು ಅಗತ್ಯ ಸಾಧನ. ಆದರೆ ಇದನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ನೂರಾರು ಜನರು ಲಕ್ಷಾಂತರ ಹಣವನ್ನು ಸೈಬರ್ ಅಪರಾಧಗಳಲ್ಲಿ ಕಳೆದುಕೊಂಡಿದ್ದಾರೆ. ಹೀಗಾಗಿ ಯಾರೊಂದಿಗೂ ಖಾಸಗಿ ಮಾಹಿತಿ ಹಂಚಿಕೊಳ್ಳಬಾರದು ಎಂದರು.
ಉಪನ್ಯಾಸಕ ದತ್ತಮೂರ್ತಿ ಭಟ್, ಡಿವಿಎಸ್ ಅಧ್ಯಕ್ಷ ರುದ್ರಪ್ಪ ಗೌಡ ಕೊಳಲೆ, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್, ಪ್ರಾಚಾರ್ಯ ಎ.ಇ.ರಾಜಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net