

ಬೆಂಗಳೂರು: ಈ ವರ್ಷ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಲು ಆಗುವುದಿಲ್ಲ. ನೀರಾವರಿ ಸಚಿವನಾಗಿ ನನ್ನ ಇಲಾಖೆಗೂ ನೀಡಲು ಆಗುವುದಿಲ್ಲ. ಈ ವಿಚಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ವಿವರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಸಚಿವರ ವಿರುದ್ಧ ಶಾಸಕರು ಬರೆದಿದ್ದಾರೆ ಎನ್ನುವ ಪತ್ರ ಬೋಗಸ್. ಯಾರದ್ದೋ ಪತ್ರಕ್ಕೆ ಯಾವುದೋ ಸಹಿ ಸೇರಿಸಿ ಹಬ್ಬಿಸಿದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ನಾವು ಶಾಸಕರ ಸಭೆ ಕರೆದಿದ್ದು, ಅವರ ಜತೆ ಮಾತನಾಡುತ್ತೇವೆ ಎಂದರು.
ಕಳೆದ ಸರ್ಕಾರ ರಾಜ್ಯದ ಆರ್ಥಿಕತೆ ದಿವಾಳಿ ಮಾಡಿದೆ. ಹೀಗಾಗಿ ಬಜೆಟ್ ಮಂಡನೆ ಸಮಯದಲ್ಲಿ ಮಂತ್ರಿಗಳು ಕೂಡ ತಾಳ್ಮೆ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಳೆದ ಸರ್ಕಾರದ ತಪ್ಪುಗಳನ್ನು ಸರಿಪಡಿಸಬೇಕು. ಜತೆಗೆ ಗ್ಯಾರಂಟಿ ಮಾತನ್ನೂ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಡುಪಿ ಕಾಲೇಜು ವಿಡಿಯೋ ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದಾಗ, ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಗೃಹಮಂತ್ರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದರು.