

ನವದೆಹಲಿ: ರಾಷ್ಟ್ರ ರಾಜಧಾನಿಯ ಹಿತದೃಷ್ಟಿಯಿಂದ ಆರೋಗ್ಯ ಆ್ಯಪ್ ಸೇತು ಹೊಂದಿರದವರಿಗೆ ದೆಹಲಿಗೆ ಪ್ರವೇಶಾವಕಾಶ ಕೊಡಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಶುಕ್ರವಾರ ಆಯೋಜನೆಗೊಂಡಿದ್ದ ಕೋವಿಡ್ 19 ಸಂಬಂಧಿತ ಸಭೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಈ ಸಲಹೆ ಕುರಿತು ದೆಹಲಿ ಸರ್ಕಾರ ಗಂಭೀರ ಚಿಂತನೆ ಆರಂಭಿಸಿದೆ. ಆದರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.
ರಾಷ್ಟ್ರೀಯ ಕಾಯಿಲೆಗಳ ನಿಯಂತ್ರಣ ಕೇಂದ್ರದ ನಿರ್ದೇಶಕ ಸುರ್ಜಿತ್ ಕುಮಾರ್ ಸಿಂಗ್ ಕೂಡ ಇದೇ ಬಗೆಯ ಶಿಫಾರಸು ಮಾಡಿದ್ದರು. ಜತೆಗೆ 3, 5 ಮತ್ತು 14ನೇ ದಿನ ಸೇರಿ ರ‍್ಯಾಪಿಡ್ ಟೆಸ್ಟ್ ಸೇರಿ ದೆಹಲಿಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಬೇಕು. ತನ್ಮೂಲಕ ಕೋವಿಡ್ 19 ಸೋಂಕಿತರು ಯಾರೂ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದರು.
ಇದನ್ನು ಆಲಿಸಿದ ಬಳಿಕ ಆ ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕೂಡ ಆರೋಗ್ಯ ಸೇತು ಆ್ಯಪ್ ಹೊಂದಿದ್ದರೆ ಮಾತ್ರ ದೆಹಲಿಗೆ ಪ್ರವೇಶ ಕೊಡಬೇಕು ಎಂದು ಹೇಳಿದರು ಎನ್ನಲಾಗಿದೆ.