

ನವದೆಹಲಿ: ಮೇ 3ರವರೆಗೆ ಲಾಕ್ಡೌನ್ ಇದ್ದರೂ ಕೇಂದ್ರ ಸರ್ಕಾರ ಹಲವು ನಿರ್ಬಂಧಗಳನ್ನು ತೆರವುಗೊಳಿಸುತ್ತಿದೆ.
ಏಪ್ರಿಲ್ 20ರಿಂದಲೇ ಅನ್ವಯವಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕೈಗಾರಿಕೆಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲಾಗಿದೆ.
ಉದ್ಯೋಗ ಖಾತ್ರಿ ಯೋಜನೆ, ಕಟ್ಟಡ ಕಾಮಗಾರಿ, ನೀರಾವರಿ ಯೋಜನೆಯ ಕೆಲಸಗಳನ್ನು ನಿರ್ವಹಿಸಬಹುದು.
ದಿನಸಿ, ತರಕಾರಿ ಸೇರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮೊದಲಿನಿಂದಲೇ ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಫ್ಯಾನ್, ಎಸಿ ಮೊದಲಾದ ಎಲೆಕ್ಟಿಕಲ್ ದುರಸ್ತಿ, ವಾಹನ ದುರಸ್ತಿ ಮಳಿಗೆಗಳು ತೆರೆಯಬಹುದು. ಇದಲ್ಲದೆ, ಮೊಬೈಲ್ ದುರಸ್ತಿ, ಕರೆನ್ಸಿ ರಿಚಾರ್ಜ್ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಬಹುದು.
ಇನ್ನು, ಹಾಲಿನ ಸಂಸ್ಕರಿತ ಉತ್ಪನ್ನಗಳ ಘಟಕ, ಬ್ರೆಡ್ ಕಾರ್ಖಾನೆ, ದಾಲ್ಮಿಲ್ಗಳನ್ನು ತೆರೆಯಲು ಕೂಡ ಈಗಾಗಲೇ ಆದೇಶ ಹೊರಡಿಸಿದೆ. ಇದಲ್ಲದೇ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಕಡಿಮೆ ಸಿಬ್ಬಂದಿಯೊಂದಿಗೆ ಆರಂಭಿಸಬಹುದು.
ಆದರೆ, ಸಲೂನ್, ಕ್ಷೌರದಂಗಡಿ ಹಾಗೂ ರೆಸ್ಟೋರಂಟ್ ಹಾಗೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವತ್ಸ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಕರೊನಾ ಪರೀಕ್ಷೆಗಾಗಿ ರ್ಯಾಪಿಡ್ ಟೆಸ್ಟಿಂಗ್ ಕಿಟ್ಗಳನ್ನು ಬಳಸುವುದನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಟೆಸ್ಟಿಂಗ್ ಕಿಟ್ಗಳು ಕಳಪೆಯಾಗಿವೆ ಎಂದು ವರದಿಗಳು ಬಂದ ಹಿನ್ನೆಲೆಯಲ್ಲಿ ಎರಡು ದಿನಗಳವರೆಗೆ ಬಳಕೆ ಬೇಡ ಎಂದು ರಾಜ್ಯಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ಹಿಂದೆ ಹೇಳಿತ್ತು. ಈಗ ಬಳಕೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.