ನಿಯಮ ಉಲ್ಲಂಘಿಸಿ ದಂಡಕ್ಕೆ ಸಿಲುಕಬೇಡಿ

klr police
ಕೋಲಾರ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಕರ್ಕಶ ಶಬ್ಧ ಉಂಟು ಮಾಡುತ್ತಿದ್ಧ ಸೈಲನ್ಸರ್‌ಗಳನ್ನು ರೋಲರ್ ಹರಿಸಿ ನಾಶಪಡಿಸಲಾಯಿತು.
Published on

ಕೋಲಾರ: ಬೈಕ್‌ಗಳಿಗೆ ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಸೈಲನ್ಸರ್‌ಗಳನ್ನು ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ನೇತೃತ್ವದಲ್ಲಿ ಬುಧವಾರ ರೋಲರ್ ಹರಿಸಿ ನಾಶಪಡಿಸಲಾಯಿತು.

ಕೋಲಾರ ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿದ್ದ 152 ಸೈಲೆನ್ಸರ್‌ಗಳನ್ನು ರಸ್ತೆಯಲ್ಲಿ ಹಾಕಿ ರೋಲರ್ ಹರಿಸಲಾಯಿತು.
ಸಂಚಾರ ಠಾಣೆ, ನಗರ ಪೊಲೀಸ್ ಠಾಣೆ, ಗಲ್‌ಪೇಟೆ, ವೇಮಗಲ್, ಮಾಲೂರು, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಽಕಾರಿಗಳು ದ್ವಿಚಕ್ರಗಳ ತಪಾಸಣೆ ನಡೆಸಿ ಕರ್ಕಶ ಶಬ್ದ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದವನ್ನು ಹಿಡಿದು ಪ್ರಕರಣ ದಾಖಲಿಸಿದ್ದರು. ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ ಸೈಲನ್ಸರ್‌ಗಳನ್ನು ಕೋಲಾರಕ್ಕೆ ತಂದು ಸಾರ್ವಜನಿಕರ ಎದುರೆ ನಾಶಪಡಿಸಿ ಜಾಗೃತಿ ಮೂಡಿಸಲಾಯಿತು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಸೈಲೆನ್ಸರ್‌ಗಳನ್ನು ಯಾರೂ ಬಳಸಬಾರದು. ಕರ್ಕಶ ಶಬ್ದದಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಸೈಲೆನ್ಸರ್‌ಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವಜನಿಕರ ಎದುರೇ ನಾಶ ಪಡಿಸಲಾಗಿದೆ ಎಂದು ಹೇಳಿದರು.
ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕು. ವಾಹನಗಳಿಗೆ ಶೋಕಿ ಮಾಡುವುದರಿಂದ ಒಬ್ಬರಿಗೆ ತೊಂದರೆಯಾಗುತ್ತದೆ. ಹೊರತು ಅನುಕೂಲವಾಗುವುದಿಲ್ಲ. ಅವುಗಳ ಬದಲು ಪುಸ್ತಕ ಕೊಂಡು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪೊಲೀಸರು ವಿಧಿಸುವ ದಂಡಕ್ಕೆ ಸಿಲುಕಬಾರದು ಎಂದು ಹೇಳಿದರು.
ಮುಂದಿನ ತಿಂಗಳಲ್ಲಿ ಜನರ ಪ್ರಾಣ ರಕ್ಷಣೆಗಾಗಿ ರಸ್ತೆ ಸುರಕ್ಷಿತ ಬಗ್ಗೆ ಹೆಚ್ಚು ಒತ್ತು ನೀಡಿ ವಿಶೇಷ ಕಾರ್ಯಾಚರಣೆ ನಡೆಸಲು ಕ್ರಮಕೈಗೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು, ಸುರಕ್ಷತೆ ದೃಷ್ಟಿಯಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು. ಏಕ ಮುಖ ರಸ್ತೆಗಳ ನಿಯಮ ಪಾಲಿಸಬೇಕು. ಹೆದ್ದಾರಿಗಳಲ್ಲಿ ನಿಗದಿಪಡಿಸಿದ ವೇಗಕ್ಕಿಂತ ಅತಿ ವೇಗವಾಗಿ ಚಲಿಸುವ ವಾಹನಗಳ ತಪಾಸಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವ್ಹೀಲಿಂಗ್ ಮಾಡುವವರ ಕುರಿತು ಲೊಕೇಷನ್ ವಿಡಿಯೋ ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು. ನಗರದ ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾಗಳ ದುರಸ್ತಿಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರ ಸರಿಪಡಿಸಲಾಗುವುದು. ನಗರದಲ್ಲಿ ಏಕ ಮುಖ ರಸ್ತೆಗಳಿಗೆ ಪರ್ಯಾಯ ರಸ್ತೆಗಳನ್ನು ಗುರುತಿಸಿ ರಸ್ತೆಗಳ ಅಭಿವೃದ್ಧಿಗೆ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.
ಜು.1ರಿಂದ ವಾಹನಗಳಿಗೆ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಅಳವಡಿಸಿರುವವರು ತೆರವುಗೊಳಿಸಲು ಕಾಲವಕಾಶ ಸಹ ನೀಡಲಾಗಿತ್ತು. ಈ ಸಂಬಂಧ 1500 ವಾಹನಗಳಿಗೆ ದಂಡ ವಿಧಿಸಲಾಗಿದೆ. ಈಗಲೂ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಡಿವೈಎಸ್ಪಿ ಎಂ.ಎಚ್.ನಾಗ್ತೆ, ವೃತ್ತ ನಿರೀಕ್ಷಕ ಸದಾನಂದ, ಪಿಎಸ್‌ಗಳಾದ ಅರುಣ್ ಪಾಟೀಲ್, ಹೇಮಂತ್ ಕುಮಾರ್, ವಸಂತ್, ಸುನಿಲ್ ಕುಮಾರ್ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net