ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ: ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ | Rajnath Singh

Rajnath Singh
Published on

ಪಾಟ್ನಾ: ಭಾರತೀಯ ಸೇನೆಯ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಬುಧವಾರ (ನ.5) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಬಿಹಾರದ ಬಂಕಾದಲ್ಲಿ ಸಾರ್ವಜನಿಕ ಱಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಸೈನಿಕರಿಗೆ ಒಂದೇ ಧರ್ಮವಿದೆ, ಅದು ಸೈನ್ಯ ಧರ್ಮ ಎಂದು ಹೇಳಿದ್ದಾರೆ. ಅಲ್ಲದೆ, ದೇಶವು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ಸೈನಿಕರು ಶೌರ್ಯದ ಮೂಲಕ ಭಾರತದ ತಲೆಯನ್ನು ಎತ್ತರಕ್ಕೆ ಏರಿಸಿದ್ದಾರೆ ಎಂದು ರಕ್ಷಣಾ ಸಚಿವ ಪ್ರತಿಪಾದಿಸಿದ್ದಾರೆ.

ಮುಂದುವರೆದು ಮಾತನಾಡಿದ ಸಿಂಗ್​, ಮೀಸಲಾತಿ ಇರಬೇಕು. ಬಿಜೆಪಿ ಕೂಡ ಮೀಸಲಾತಿಯ ಬೆಂಬಲಿಗರಾಗಿದ್ದೇವೆ. ನಾವು ಬಡವರಿಗೆ ಮೀಸಲಾತಿ ನೀಡಿದ್ದೇವೆ. ಆದರೆ ಸೇನೆಯ ಬಗ್ಗೆ? ನಮ್ಮ ಸೇನಾ ಸೈನಿಕರಿಗೆ ಒಂದೇ ಧರ್ಮವಿದೆ. ಆ ಧರ್ಮ ಸೈನ್ಯ ಧರ್ಮ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮವಿಲ್ಲ. ನಮ್ಮ ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಜಾತಿ, ಪಂಥ ಮತ್ತು ಧರ್ಮದ ಈ ರಾಜಕೀಯವು ದೇಶಕ್ಕೆ ದೊಡ್ಡ ಹಾನಿಯನ್ನು ಉಂಟುಮಾಡಿದೆ. ಸಮಾಜದ ಎಲ್ಲಾ ವರ್ಗಗಳನ್ನು ಮೇಲಕ್ಕೆತ್ತಬೇಕು ಎಂಬುದು ನಮ್ಮ ಚಿಂತನೆಯಾಗಿದೆ. ನಾವು ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದೇವೆ. ಅಲ್ಲದೆ, ಜಾತಿ, ಪಂಥ ಅಥವಾ ಧರ್ಮದ ಆಧಾರದ ಮೇಲೆ ನಾವು ತಾರತಮ್ಯ ಮಾಡಲು ಬಯಸುವುದಿಲ್ಲ. ನಮ್ಮ ದೇಶದ ಋಷಿಮುನಿಗಳು ಮತ್ತು ಜನರು ಇದರ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಆಪರೇಷನ್ ಸಿಂಧೂರದ ಬಗ್ಗೆಯೂ ರಕ್ಷಣಾ ಸಚಿವರು ಪ್ರಸ್ತಾಪಿಸಿದ್ದು, ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಎಲ್ಲಾ ಪ್ರಮುಖ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಲಾಗಿದೆ. ಅಲ್ಲದೆ, ಕಾರ್ಯಾಚರಣೆ ಇನ್ನೂ ಮುಗಿದಿಲ್ಲ, ಆದರೆ ಮುಂದೂಡಲಾಗಿದೆ ಎಂದು ಸಿಂಗ್ ಹೇಳಿದರು.

ರಾಹುಲ್​ ಗಾಂಧಿ ಹೇಳಿದ್ದೇನು..?

ಮಂಗಳವಾರ ನಡೆದ ಬಿಹಾರ ಚುನಾವಣಾ ಪ್ರಚಾರ ವೇಳೆ ಮಾತನಾಡಿ ರಾಹುಲ್, ಭಾರತೀಯ ಸೇನೆಯು ದೇಶದ ಜನಸಂಖ್ಯೆಯ ಶೇ.10 ರಷ್ಟು ಜನರ ನಿಯಂತ್ರಣದಲ್ಲಿದೆ ಎಂದು ಹೇಳಿದ್ದರು. ಇದು ಸಂಸ್ಥೆಯಲ್ಲಿ ಮೇಲ್ಜಾತಿಗಳ ಪ್ರಾಬಲ್ಯವನ್ನು ಉಲ್ಲೇಖಿಸುತ್ತದೆ ಎಂದು ರಾಹುಲ್​ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿನ ಆರ್ಥಿಕ ಅಸಮಾನತೆಯ ಸಮಸ್ಯೆಯನ್ನು ಅವರು ಎತ್ತಿ ಗಾಂಧಿ, ದೇಶದಲ್ಲಿ ಜನಸಂಖ್ಯೆಯ ಶೇ. 90 ರಷ್ಟು ದಲಿತರು, ಮಹಾದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದವರಾಗಿದ್ದರೂ, ಕಾರ್ಪೊರೇಟ್ ಭಾರತ, ಅಧಿಕಾರಶಾಹಿ, ನ್ಯಾಯಾಂಗ ಮತ್ತು ಇತರ ಪ್ರಮುಖ ಸಂಸ್ಥೆಗಳಲ್ಲಿ ಕಡಿಮೆ ಪ್ರಾತಿನಿಧ್ಯವಿದೆ ಎಂದು ಹೇಳಿದ್ದಾರೆ.

ದೇಶದ ಬ್ಯಾಂಕಿನ ಎಲ್ಲಾ ಹಣ ಕಾರ್ಪೊರೇಟ್ ಹೋಗುತ್ತದೆ. ಅವರಿಗೆ ಎಲ್ಲಾ ಉದ್ಯೋಗಗಳು ಸಿಗುತ್ತವೆ, ಮತ್ತು ಅಧಿಕಾರಶಾಹಿಗಳಿಗೆ ಹೆಚ್ಚಿನ ಹುದ್ದೆಗಳಲ್ಲಿಯೂ ಪ್ರಾಬಲ್ಯ ಸಾಧಿಸುತ್ತಾರೆ. ಅವರು ಎಲ್ಲವನ್ನೂ ನಿಯಂತ್ರಿಸುತ್ತಾರೆ. ನ್ಯಾಯಾಂಗವನ್ನು ನೋಡಿ. ಅಲ್ಲಿಯೂ ಎಲ್ಲವನ್ನೂ ನಿರ್ವಹಿಸುತ್ತಾರೆ. ಅಧಿಕಾರಶಾಹಿಗಳಿಗೆ ಸೈನ್ಯದ ಮೇಲೂ ನಿಯಂತ್ರಣವಿದೆ. ನೀವು ಎಲ್ಲಿಯೂ ಜನಸಂಖ್ಯೆಯ ಶೇ. 90 ಅನ್ನು ಕಾಣುವುದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅದಾನಿ ಮತ್ತು ಅಂಬಾನಿ ಸೇರಿದಂತೆ ಭಾರತದ 500 ದೊಡ್ಡ ಕಂಪನಿಗಳು ಪ್ರಧಾನವಾಗಿ ಜನಸಂಖ್ಯೆಯ ಕೇವಲ ಶೇ.10 ರಷ್ಟಿರುವ ಸಣ್ಣ ಗಣ್ಯ ಗುಂಪಿನ ವ್ಯಕ್ತಿಗಳ ಒಡೆತನದಲ್ಲಿವೆ. ಈ ಗುಂಪು ಅಸಮಾನ ಪ್ರಮಾಣದ ಸಂಪತ್ತು, ಬ್ಯಾಂಕ್ ಸಾಲಗಳು ಮತ್ತು ವಿವಿಧ ವಲಯಗಳಲ್ಲಿ ಪ್ರಭಾವಿ ಸ್ಥಾನಗಳನ್ನು ನಿಯಂತ್ರಿಸುತ್ತದೆ ಎಂದು ಗಾಂಧಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net