

ಬೆಂಗಳೂರು: ಮದುವೆಯಾಗದ ಮಗಳು, ಕೆಲಸವಿಲ್ಲದ ಮಗನನ್ನು ಮನೆಯಿಂದ ಹೊರಹಾಕಲಾದೀತೆ ?. ಹೀಗೆಂದು ಬಿಜೆಪಿ ರಾಜ್ಯ ನಾಯಕರನ್ನು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರಶ್ನಿಸಿ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ‘ಲೋಕಸಭಾ ಕ್ಷೇತ್ರಗಳ ಮತದಾರರ ಚೇತನ ಅಭಿಯಾನ’ ಪೂರ್ವಭಾವಿ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ, ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ ತಡವಾಗಿದೆ ಎನ್ನುವುದು ಎಷ್ಟು ನಿಜವೋ ನೇಮಕವಾಗುವುದೂ ಅಷ್ಟೇ ಸತ್ಯ.
ಎರಡೂ ಹುದ್ದೆಗಳ ಆಯ್ಕೆ ವಿಳಂಬಕ್ಕೂ ಹಲವು ಕಾರಣಗಳಿರುತ್ತವೆ. ವರಿಷ್ಠರು ಸಕಾಲದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ. ಇದೇ ವಿಷಯ ದೊಡ್ಡದು ಮಾಡಿ ಚರ್ಚಿಸುತ್ತಾ ಕುಳಿತುಕೊಳ್ಳುವುದು ಬೇಡ. ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
‘ಆಪರೇಷನ್ ಹಸ್ತ’ವೆಂಬ ಭ್ರಮೆ ಸೃಷ್ಟಿಸಲಾಗುತ್ತಿದ್ದು, ಆ ಭ್ರಮೆಯ ಅಧೀನರಾಗಬೇಡಿ. ನಮ್ಮ ಪಕ್ಷದ ನಾಯಕರೊಂದಿಗೂ ಕಾಂಗ್ರೆಸ್‌ನ 40-45 ಶಾಸಕರು ಸಂಪರ್ಕದಲ್ಲಿದ್ದಾರೆ. ವರಿಷ್ಠರು ಒಪ್ಪಿಗೆ ನೀಡಿದರೆ ಒಂದು ದಿನದಲ್ಲಿ ಮಾಡಿ ಮುಗಿಸುವ ಕೆಲಸವದು ಎನ್ನುವ ಮೂಲಕ ಬಿ.ಎಲ್.ಸಂತೋಷ್ ಪರೋಕ್ಷವಾಗಿ ರಿವರ್ಸ್ ಆಪರೇಷನ್‌ಗೆ ಸಿದ್ಧವೆಂಬ ಸುಳಿವು ನೀಡಿದ್ದಾರೆ.
ಬಿಜೆಪಿ ವಿಚಾರಧಾರೆ ಒಪ್ಪಿ ಬಂದವರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ, ಬಿಜೆಪಿ ಕೂಡ ಸಾಕಷ್ಟು ಸೋಲುಗಳನ್ನು ಕಂಡುಂಡಿದೆ. ವಿಧಾನಸಭೆ ಚುನಾವಣೆ ಸೋಲಿನಿಂದ ನಿರಾಸೆ ಬೇಡ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಕಾದು ನೋಡಿ ಎಂಬ ಮಾರ್ಮಿಕ ಮಾತು ಸೇರಿಸಿದ್ದಾರೆ.
ನಮ್ಮ ಜತೆಗೆ ಬಂದವರನ್ನು ಬಾಂಬೆ ಬಾಯ್ಸ ಎಂದು ಕರೆಯುವುದು ಸರಿಯಲ್ಲ. ಕಷ್ಟ ಕಾಲಕ್ಕೆ ನಮ್ಮ ಜತೆಗಿದ್ದಾರೆ. ಅವರು ಪಕ್ಷ ಬಿಟ್ಟು ಹೋಗಾತ್ತಾರೆ ಎಂದು ನಾವೇ ಹೇಳುವುದು ಸರಿಯಲ್ಲ. ಹಾಗೆಂದು ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಅಷ್ಟಕ್ಕೂ ಯಾರೊಬ್ಬರೂ ಪಕ್ಷ ತೊರೆಯಲ್ಲ ಎಂದು ಬಿ.ಎಲ್.ಸಂತೋಷ್ ಅಭಯ ನೀಡಿರುವುದಾಗಿ ಮೂಲಗಳು ತಿಳಿಸಿವೆ.