ಕೊರೊನಾ ವೈರಸ್ ಬಗ್ಗೆ ರೂಮರ್ ನಂಬೋದ್ಯಾಕೆ? ಡೌಟ್ ಇದ್ರೆ ಟೆಸ್ಟ್ ಮಾಡಿಸಿಕೊಳ್ಳಿ: ಪ್ರಧಾನಿ ನರೇಂದ್ರ ಮೋದಿ

Narendra Modi 7 March 20
Published on

ನವದೆಹಲಿ: ಕೊರೊನಾ ವೈರಸ್​ ಬಗ್ಗೆ ಯಾರೂ ಭಯ ಪಡಬೇಕಿಲ್ಲ. ನಿಯಂತ್ರಣಕ್ಕೆ, ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಈ ಹಿಂದೆಯೇ ಟ್ವೀಟ್ ಮಾಡಿ ಜನರಿಗೆ ಧೈರ್ಯ ತುಂಬಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೂಡ ಅದನ್ನು ಪುನರುಚ್ಚರಿಸಿದ್ದಾರೆ.

ನಮ್ಮ ದೇಶದಲ್ಲಿ ಒಟ್ಟು 31 ಜನರಲ್ಲಿ ಕೊರೊನಾ ವೈರಸ್​ ದೃಢಪಟ್ಟಿದೆ. ಶಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಅಗತ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. ಇದರೊಂದಿಗೆ ಜನರಲ್ಲಿ ಆತಂಕವೂ ಅಧಿಕವಾಗುತ್ತಿದೆ. ಏನೇ ಸಣ್ಣ ಶೀತವಾದರೂ ಕೊರೊನಾ ಇರಬಹುದಾ ಎಂಬ ಅನುಮಾನವೇ ಕಾಡುತ್ತಿದೆ. ಹಾಗೇ ಕೊರೊನಾ ಬಗ್ಗೆ ಇಲ್ಲಸಲ್ಲದ ಗಾಳಿಸುದ್ದಿಗಳೂ ಹಬ್ಬುತ್ತಿವೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದು, ಜನರು ತಮ್ಮ ಆರೋಗ್ಯದೊಂದಿಗೆ, ಹಬ್ಬುತ್ತಿರುವ ರೂಮರ್​ಗಳ ವಿಷಯದಲ್ಲೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ದೇಶದ ವಿವಿಧ ಪ್ರದೇಶಗಳಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ ನಡೆಸಿದ ಅವರು, ಇಂತಹ ಸಮಯಗಳಲ್ಲಿ ರೂಮರ್​ಗಳು ಬಹುಬೇಗನೇ ಹಬ್ಬುತ್ತವೆ. ಅದನ್ನು ತಿನ್ನಬೇಡಿ, ಇದನ್ನು ತಿನ್ನಬೇಡಿ ಎಂದು ಕೆಲವರು ಬಂದು ಹೇಳಬಹುದು. ಅಥವಾ ಇಂಥದ್ದನ್ನು ತಿಂದರೆ ಕೊರೊನಾ ತಡೆಯಬಹುದು ಎಂಬ ಸಲಹೆಯನ್ನೂ ನೀಡಬಹುದು. ಆದರೆ ಇಂತಹದ್ದನ್ನೆಲ್ಲ ನಂಬಲು ಹೋಗಬಾರದು ಎಂದು ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ಕೊರೊನಾ ವೈರಸ್​ ಬಗ್ಗೆ ಅನುಮಾನಗಳಿದ್ದರೆ, ಆರೋಗ್ಯದಲ್ಲಿ ಏರುಪೇರಾದರೆ ಹೋಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ, ಪರೀಕ್ಷೆ ಮಾಡಿಸಿಕೊಳ್ಳಿ. ಅವರು ಏನು ಹೇಳುತ್ತಾರೋ ಹಾಗೇ ಕೇಳಿ ಎಂದು ಸಲಹೆ ನೀಡಿದ್ದಾರೆ.

ಒಂದು ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಸಣ್ಣ ಪ್ರಮಾಣದಲ್ಲಿ ಆರೋಗ್ಯದಲ್ಲಿ ಏರುಪೇರಾದರೂ ಕೂಡಲೇ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಉಳಿದವರಿಗೆ ಹರಡುವುದನ್ನು ತಪ್ಪಿಸಬಹುದು. ಕೊರೊನಾ ತಗುಲಿದ್ದರೆ ಅಂತಹವರು ಮಾಸ್ಕ್​, ಕೈಗವಸುಗಳನ್ನು ಹಾಕಿಕೊಳ್ಳಬೇಕು. ಆದಷ್ಟು ಸಾರ್ವಜನಿಕ ಸ್ಥಳಗಳಿಗೆ ಬಾರದೆ ದೂರವೇ ಉಳಿಯಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಮೋದಿ ಹೇಳಿದರು.

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರದ ಆಯ್ದ ಅಂಗಡಿಗಳ ಮಾಲೀಕರು ಹಾಗೂ ಫಲಾನುಭವಿಗಳೊಂದಿಗೆ ನರೇಂದ್ರ ಮೋದಿ ಸಂವಾದ ನಡೆಸಿ, ಆರೋಗ್ಯದ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net