ಸಂಪಾದಕೀಯ | ಸಭ್ಯತೆ ಮೀರದಿರಲಿ

photo (1)
Published on

ರಾಜಕೀಯದಲ್ಲಿ ತತ್ವ ಸಿದ್ಧಾಂತಗಳ ಕುರಿತಾದ ವೈಚಾರಿಕ ವಿರೋಧವೇನೋ ಸರಿ. ಈ ಭಿನ್ನಾಭಿಪ್ರಾಯವನ್ನು ಮಂಡಿಸಲು ತನ್ನದೇ ಆದ ಕ್ರಮ ಇದೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಹಲವು ದಿಗ್ಗಜ ನಾಯಕರು, ಮುತ್ಸದ್ದಿಗಳು ರಾಜನೀತಿ ಮಾಡದೆ, ರಾಷ್ಟ್ರನೀತಿಗೆ ಆದ್ಯತೆ ನೀಡಿದ್ದರಿಂದಲೇ ಪ್ರಜಾತಂತ್ರ ಇಂದಿಗೂ ಬಲಿಷ್ಠವಾಗಿದೆ.

ಮತಭೇದಗಳು ಸಾಮಾನ್ಯ. ಅದು ಮನಸ್ಸುಗಳನ್ನು ವಿಭಜಿಸಬಾರದಷ್ಟೇ. ಅಭಿಪ್ರಾಯಗಳು, ಟೀಕೆಗಳು ವೈಚಾರಿಕ ತಳಹದಿಯನ್ನು ಗಟ್ಟಿಗೊಳಿಸಿ ರಾಜಕೀಯವನ್ನು ಪ್ರಬುದ್ಧತೆಯತ್ತ ಕೊಂಡೊಯ್ಯಬೇಕು. ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳು ಸಂಭವಿಸುತ್ತಿರುವ ಪರಿಣಾಮವೇ ಉಚ್ಚಶಿಕ್ಷಿತರು, ಯುವಕರು ರಾಜಕೀಯ ರಂಗ ಪ್ರವೇಶಿಸಲು ಹಿಂದೇಟು ಹಾಕುವಂತಾಗಿದೆ. ಯಾವುದೇ ಕಾರಣಕ್ಕೂ ರಾಜಕೀಯ ವಿರೋಧ ವ್ಯಕ್ತಿಗತ ತೇಜೋವಧೆಗೆ ಇಳಿಯಬಾರದು. ಬಿಹಾರದಲ್ಲಿ ಇತ್ತೀಚೆಗೆ ಜನಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯನ್ನು ಟೀಕಿಸಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೇ ಪಕ್ಷದ ರಾಜಕೀಯ ನಾಯಕರು ಇಂಥ ಮಾತುಗಳನ್ನಾಡಬಾರದು. ನಾಯಕರ ವಿವಾದಾತ್ಮಕ ಮಾತುಗಳೇ ಕಾರ್ಯಕರ್ತರಿಗೆ ಮಾದರಿಯಾಗುತ್ತವೆ. ರಾಹುಲ್ ಗಾಂಧಿ ಹೇಳಿಕೆ ವಿವಾದದ ಕಿಡಿಯನ್ನು ಹೊತ್ತಿಸಿದ್ದು, ಇದೇ ಘಟನೆಗೆ ಸಂಬಂಧಿಸಿ ಗುರುವಾರ ಪಟನಾದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಕೆಲವರಿಗೆ ಗಾಯಗಳಾಗಿವೆ. 2024ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆಯಲ್ಲೂ ಇಂಥ ಅವಿವೇಕದ ಹೇಳಿಕೆಗಳು ಆರ್ಭಟಿಸಿದ್ದವು. ಚುನಾವಣಾ ಆಯೋಗ ಕೆಲ ನಾಯಕರಿಗೆ ಹಲವು ದಿನಗಳ ಕಾಲ ಪ್ರಚಾರ ಮಾಡದಂತೆ ನಿಷೇಧ ಹೇರಿತ್ತು. ಆದರೂ, ಜನನಾಯಕರು ಪಾಠ ಕಲಿತಿಲ್ಲ ಎಂಬುದು ಸ್ಪಷ್ಟ. ಪ್ರಧಾನಿ ಮೋದಿಯವರನ್ನು ಸಾವಿನ ದಲ್ಲಾಳಿ, ವಿಷಸರ್ಪ, ನೀಚ ಎಂದೆಲ್ಲ ಟೀಕಿಸಿದ್ದನ್ನು ಪ್ರಜ್ಞಾವಂತ ನಾಗರಿಕ ಸಮಾಜ ಖಂಡಿಸಿತು.

ಆಡಳಿತ ಮತ್ತು ಪ್ರತಿಪಕ್ಷಗಳೆಂದರೆ ಪರಸ್ಪರ ಶತ್ರುಗಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷ ಅಥವಾ ಕೂಟ ಆಡಳಿತ ನಡೆಸಿದರೆ, ಪ್ರತಿಪಕ್ಷ ಸರ್ಕಾರ ದಾರಿತಪ್ಪದಂತೆ ಕಣ್ಗಾವಲು ಇರಿಸುತ್ತದೆ. ಈ ನಡುವೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಗೃಹ ಸಚಿವ ಅಮಿತ್ ಷಾ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದು, ವಿವಾದದ ಅಗ್ನಿಗೆ ತುಪ್ಪ ಸುರಿದಂತಾಗಿದೆ. ‘ಬಾಂಗ್ಲಾದೇಶದಿಂದ ನುಸುಳುವಿಕೆಯನ್ನು ತಡೆಯುವಲ್ಲಿ ಅಮಿತ್ ಷಾ ವಿಫಲರಾಗಿದ್ದು, ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು’ ಎಂದು ವಿವಾದಾತ್ಮಕ ಮಾತುಗಳನ್ನಾಡಿರುವುದು ಖಂಡನಾರ್ಹ.

ಮೊಯಿತ್ರಾ ಹೇಳಿಕೆಯನ್ನು ಆಕ್ಷೇಪಿಸಿ ಬಿಜೆಪಿ ದೂರು ದಾಖಲಿಸಿದೆ. ಜನಪ್ರತಿನಿಧಿಗಳಾದವರು ಜನರಲ್ಲಿ ಅರಿವು ಮೂಡಿಸುವ, ಅಭಿವೃದ್ಧಿಯ ಬಗ್ಗೆ ಸ್ಪಷ್ಟ ನಿಲುವು ತಿಳಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಮಾಜದಲ್ಲಿ ದ್ವೇಷ, ಹಿಂಸೆಯನ್ನು ಪ್ರಚೋದಿಸುವಂಥ ಹೇಳಿಕೆಯನ್ನು ನೀಡುವುದು ಅಕ್ಷಮ್ಯ. ಇದಕ್ಕೆಲ್ಲ ಕಡಿವಾಣ ಹಾಕಲೇ ಬೇಕು. ರಾಜಕೀಯ ನಾಯಕರು ಈ ನಿಟ್ಟಿನಲ್ಲಿ ಸಂಯಮದ, ಸಭ್ಯತೆಯ ಲಕ್ಷ್ಮಣರೇಖೆಯನ್ನು ಮೀರಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net