

ತುಮಕೂರು: ದಿನಬಳಕೆಯಲ್ಲಿ ಬಳಸುವ ವಸ್ತುಗಳನ್ನು ಮರುಬಳಕೆ ಮಾಡುವ ಆಲೋಚನೆಗಳನ್ನು ಶಿಕ್ಷಣ ಪದ್ಧತಿಯಲ್ಲಿಯೇ ಅಳವಡಿಸಿಕೊಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ನಗರದ ಗಾಜಿನಮನೆಯಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಜ.22ರವರೆಗೆ ನಡೆಯಲಿರುವ ಸ್ವದೇಶಿ ಮೇಳಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ವಿದೇಶಿ ವಸ್ತುಗಳ
ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಳ್ಳಬೇಕು ಎಂದರು.
ಸ್ವದೇಶಿ ಮೇಳದಲ್ಲಿ ಬೀಸುವ ಕಲ್ಲಿಗೆ ಚಾಲನೆ ನೀಡಲಾಯಿತು
ಶಾಲಾ-ಕಾಲೇಜುಗಳಲ್ಲಿಯೇ ಪರಿಸರದ ಮಹತ್ವದ ಬಗ್ಗೆ ತಿಳಿಸಿಕೊಡಬೇಕು, ಇದಕ್ಕಾಗಿ ವಿದ್ಯಾರ್ಥಿಗಳಿಗೆ ಭಾರತೀಯ ಪದ್ಧತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸ್ವದೇಶಿ ಜಾಗರಣ್ ಮಂಚ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಭಾರತ ಹಲವು ಸಂಸ್ಕೃತಿಗಳ ತೊಟ್ಟಿಲು, ಇಲ್ಲಿನ ಆಹಾರ ಪದ್ಧತಿ, ಔಷಧೀಯ ಸಸ್ಯಗಳು ಎಲ್ಲದರ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಿ, ಅವರನ್ನು ಸುತ್ತಮುತ್ತಲಿನ ಭೌಗೋಳಿಕ ಪ್ರದೇಶದಲ್ಲಿ ದೊರೆಯುವಂತಹ ವಸ್ತುಗಳನ್ನು
ನಾವೆಲ್ಲರೂ ಬಳಸುವಂತಾಗಬೇಕು, ಇದರಿಂದ ದೇಶದ ಆರ್ಥಿಕತೆಗೂ ಅನುಕೂಲ ಎಂದರು.
ಮರಗಳನ್ನು ಕಡಿದು ಪೇಪರ್ ತಯಾರಿಸಲಾಗುತ್ತಿದೆ. ಆದರೆ, ಪೇಪರ್ ಪರಿಸರಸ್ನೇಹಿ ಎಂಬ ತಪ್ಪು ಭಾವನೆ ಜನರಲ್ಲಿದೆ. ಶೂನ್ಯ ತಾಜ್ಯ ಅಡುಗೆ ಮನೆ ಚಿಂತನೆ ಮಹಿಳೆಯರಲ್ಲಿ
ಮೂಡಬೇಕು. ಈ ಕುರಿತು ಸಂಶೋಧನೆಗಳೂ ನಡೆಯಬೇಕು ಎಂದರು. ಮೇಯರ್ ಪ್ರಭಾವತಿ ಮಾತನಾಡಿ, ಭತ್ತಕುಟ್ಟಿ, ರಾಗಿ ಬೀಸಿ ಕಾರ್ಯಕ್ರಮ ಉದ್ಘಾಟಿಸಿದ್ದು, ಎಲ್ಲರಿಗೂ ಬಾಲ್ಯ ನೆನಪಿಗೆ ತರಿಸಿತು ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್, ಸ್ವದೇಶಿ ಜಾಗರಣ್ ಮಂಚ್‌ನ ಸಂಘಟಕ ಆ.ನ.ಲಿಂಗಪ್ಪ, ಸಂಯೋಜಕರಾದ ಜಿ.ಕೆ.ವಾಸವಿಗುಪ್ತ, ಸಂಚಾಲಕರಾದ ಚೈತ್ರ ಮಂಜುನಾಥ್,ರಮ್ಯ, ಲಕ್ಷ್ಮಿ, ಸಂಯೋಜಕ ಜಗದೀಶ್ ಮತ್ತಿತರರು ಇದ್ದರು. ಸ್ವದೇಶಿ ಎಂಬುದು ಗಾಂಧೀಜಿಯವರ ಪರಿಕಲ್ಪನೆ. ಯಾವುದು ಭೌಗೋಳಿಕವಾಗಿ ಹತ್ತಿರದಲ್ಲಿ ತಯಾರಾಗುತ್ತೋ ಅದನ್ನು ಸ್ವದೇಶಿ ಎನ್ನಬಹುದು. ಇದನ್ನು ಹಿಂದೂ ಎಕಾನಮಿ ಎಂಬ ಪರಿಕಲ್ಪನೆಯಲ್ಲಿ ಕಾಣಬಹುದು ಎಂದು ವಾಗ್ಮೀ, ವಿಜಯವಾಣಿ
ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಋಗ್ವೇದ ಕಾಲದಲ್ಲಿಯೇ ಅರ್ಥಶಾಸ್ತ್ರದ ಪರಿಚಯ ಭಾರತೀಯರಿಗಿತ್ತು. ಆದರೆ, ಈಗಿನ ಪೆಂಟೆಂಟ್ ರೀತಿಯ ಕೇಂದ್ರೀಕೃತವಲ್ಲದೆ, ಆರೋಗ್ಯಕರ ಪೈಪೋಟಿಯಿಂದ ಕೂಡಿದ
ವಿಕೇಂದ್ರೀಕೃತ ವ್ಯವಸ್ಥೆಯಿಂದ ಕೂಡಿತ್ತು ಎಂದರು.
ಸರ್ಕಾರ ನೀಡುವ ಉಚಿತ ಪಡಿತರ, ನಗದು ಇವುಗಳಿಗೆ ಕಾಯುವಂತಹ ಎಕಾನಮಿ ಹಿಂದೂ ಎಕಾನಮಿ ಅಲ್ಲ, ಪ್ರಿಯಾಂಕಾ ಗಾಂಧಿ ಘೋಷಿಸಿದ ಎರಡು ಸಾವಿರ ಭಿಕ್ಷೆಗೆ ಕಾಯುವಂತಹ ಪರಾವಲಂಬಿ ಆರ್ಥಿಕತೆ ನಮ್ಮದಲ್ಲ ಎಂದರು.
ತುಮಕೂರಿನಲ್ಲಿ ಸ್ವದೇಶಿ ಜಾಗರಣಾ ಮಂಚ್ ಆಯೋಜಿಸಿರುವ ಸ್ವದೇಶಿ ಮೇಳಕ್ಕೆ ತೇಜಸ್ವಿನಿ ಅನಂತ್‌ಕುಮಾರ್ ಚಾಲನೆ ನೀಡಿದರು. ಜಿ.ಬಿ.ಜ್ಯೋತಿಗಣೇಶ್, ಪ್ರಭಾವತಿ, ಚಕ್ರವರ್ತಿ ಸೂಲಿಬೆಲೆ, ಆ.ನ.ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.