

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ವಿರುದ್ಧದ ಸಮರದಲ್ಲಿ ತೊಡಗಿಕೊಂಡಿವೆ. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು ಒಂದೆಡೆಯಾದರೆ, ಲಸಿಕೆ ಅಭಿಯಾನಕ್ಕೆ ವೇಗ ನೀಡುವುದು ಮತ್ತೊಂದು ಸವಾಲು. ಈ ನಿಟ್ಟಿನಲ್ಲಿ ಕೈಗೊಂಡ ಸರಣಿ ಕ್ರಮಗಳ ಲವಾಗಿ ಕೋವಿಡ್ನ ಎರಡನೆಯ ಅಲೆ ಇಳಿಮುಖವಾಗುತ್ತಿದ್ದು, ದೇಶದ ಬಹುತೇಕ ರಾಜ್ಯಗಳಲ್ಲಿ ಅನ್ಲಾಕ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಮೂರನೆಯ ಅಲೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಲಸಿಕೆ ಅಭಿಯಾನವನ್ನೂ ತೀವ್ರಗೊಳಿಸಲಾಗಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಉಚಿತ ಲಸಿಕೆಯನ್ನು ಪೂರೈಸಲಿದ್ದು, ರಾಜ್ಯಗಳ ಮೇಲಿನ ಈ ಸಂಬಂಧದ ಹೊರೆ ತಗ್ಗಲಿದೆ. ಅಲ್ಲದೆ, ಕರೊನಾ ಸಂಬಂಧದ ಮಾಹಿತಿಗಳಿಗೆ, ಲಸಿಕೆ ಕುರಿತಾದ ಅರಿವಿನ ವಿಸ್ತರಣೆಗೆ ಕೇಂದ್ರ, ರಾಜ್ಯ ಸರ್ಕಾರಗಳು ವೆಬ್ಪೋರ್ಟಲ್, ಆ್ಯಪ್ ಸೇರಿದಂತೆ ಹಲವು ವೇದಿಕೆಗಳನ್ನು ನಿರ್ಮಿಸಿವೆ. ಅವುಗಳ ಮುಖೇನ ಅಧಿಕೃತ ಮಾಹಿತಿ ನೀಡಲಾಗುತ್ತಿದ್ದರೂ, ಸಾಮಾಜಿಕ ಮಾಧ್ಯಮಗಳ ಅಬ್ಬರದಲ್ಲಿ ವದಂತಿ ಅಥವಾ ಸುಳ್ಳುಸುದ್ದಿಗಳೇ ಪ್ರವಾಗಿ ಹರಡಿ, ಗೊಂದಲಕ್ಕೆ ಕಾರಣ ವಾಗುತ್ತಿರುವುದು ವಿಪರ್ಯಾಸ. ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ಅದು ಸರಿಯೋ, ತಪ್ಪೋ ಎಂಬುದನ್ನು ಪರಿಷ್ಕರಿಸದೆ ಮುಂದಿನ ಗುಂಪುಗಳಿಗೆ ಕಳಿಸುವ ಜನರು ಇಂಥ ಗೊಂದಲವನ್ನು ಹೆಚ್ಚಿಸುತ್ತಿದ್ದಾರೆ.
ಲಸಿಕೆ ಬಂದ ಆರಂಭದ ದಿನಗಳಲ್ಲಿ ಏನೇನೋ ವದಂತಿಗಳನ್ನು ಹರಡಿದ ಪರಿಣಾಮ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಆದರೆ, ಎರಡನೆಯ ಅಲೆ ತೀವ್ರಗೊಂಡಾಗ ಲಸಿಕಾ ಕೇಂದ್ರಗಳ ಮುಂದೆ ಉದ್ದನೆಯ ಸರತಿ ಸಾಲು ಕಂಡುಬಂತು. ಪ್ರಸಕ್ತ ಸಂದರ್ಭದಲ್ಲಿ ಮತ್ತೆ ಸೃಷ್ಟಿಯಾದ ಕೆಲ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಮೂಲಕ ಕೇಂದ್ರ ಸರ್ಕಾರ ಆರಂಭದ ಹಂತದಲ್ಲೇ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ವೈಜ್ಞಾನಿಕ ತಂಡದ ಬೆಂಬಲವಿಲ್ಲದೆ ಕೋವಿಶೀಲ್ಡ್ನ ಎರಡು ಡೋಸ್ಗಳ ನಡುವಿನ ಅಂತರದ ಅವಧಿಯನ್ನು ಹೆಚ್ಚಿಸಲಾಗಿದೆ ಎಂಬ ಆಕ್ಷೇಪಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಉತ್ತರಿಸಿದ್ದಾರೆ.
"ಕೋವಿಶೀಲ್ಡ್ನ ಎರಡು ಡೋಸ್ಗಳ ನಡುವಿನ ಅಂತರದ ವಿಚಾರದಲ್ಲಿ ಕೈಗೊಂಡ ನಿರ್ಧಾರ ಪಾರದರ್ಶಕವಾಗಿದ್ದು, ವೈಜ್ಞಾನಿಕ ದತ್ತಾಂಶವನ್ನು ಆಧರಿಸಿದೆ' ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ್ ಬಯೋಟೆಕ್ನ "ಕೊವ್ಯಾಕ್ಸಿನ್' ಲಸಿಕೆ ತಯಾರಿಸಲು ನವಜಾತ ಕರುಗಳ ರಕ್ತಸಾರವನ್ನು (ಸೀರಂ) ಬಳಸಲಾಗುತ್ತಿದೆ ಎಂಬ ವದಂತಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸೀರಂಗಾಗಿ ಗೋಹತ್ಯೆ ಮಾಡಲಾಗುತ್ತಿದೆ ಎಂಬಂರ್ಥದ ಟ್ವೀಟ್ನ್ನು ಕಾಂಗ್ರೆಸ್ ಮುಖಂಡರೊಬ್ಬರು ಮಾಡಿದ್ದರಿಂದ, ಈ ವಿವಾದ ತಾರಕಕ್ಕೆ ಏರಿತ್ತು.
ವೆರೊ ಸೆಲ್ಗಳ ತಯಾರಿ ಅಥವಾ ಬೆಳವಣಿಗೆಗಷ್ಟೇ ನವಜಾತ ಕರುಗಳ ಸೀರಂ ಬಳಸಲಾಗುತ್ತದೆ ಎಂದಿರುವ ಕೇಂದ್ರ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಪೋಸ್ಟ್ಗಳಲ್ಲಿ ವಾಸ್ತವ ತಿರುಚಲಾಗಿದೆ ಎಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಸ್ವಾಸ್ಥ$್ಯಕ್ಕೆ ಹಾನಿಯಾಗುವಂಥ ಉದ್ಧಟತನ ಮಾಡಬಾರದು. ವೈಜ್ಞಾನಿಕ ವಿಷಯಗಳ ವಿಷಯದಲ್ಲಂತೂ ತಿಳಿದುಕೊಂಡು ಪ್ರತಿಕ್ರಿಯಿಸುವುದು ಕ್ಷೇಮ.