

ಕಳಸ: ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಬುಧವಾರ ಪೀಠೋಪಕರಣ ಕೊಡುಗೆ ನೀಡಿದೆ.
ಕೆಪಿಎಸ್‌ನಲ್ಲಿ ಪೀಠೋಪಕರಣ ಕೊರತೆಯಿಂದ ಮಕ್ಕಳು ನೆಲದ ಮೇಲೆ ಕುಳಿತು ವ್ಯಾಸಂಗ ಮಾಡುವ ಬಗ್ಗೆ ಶಾಲಾಭಿವೃದ್ಧಿ ಸಮಿತಿಯು ಗ್ರಾಮ ಅರಣ್ಯ ಸಮಿತಿಯ ಗಮನ ಸೆಳೆದಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ ಮಾರ್ಗದರ್ಶನದಲ್ಲಿ ಕೆಪಿಎಸ್‌ಗೆ 2.40 ಲಕ್ಷ ರೂ. ವೆಚ್ಚದಲ್ಲಿ 30 ಡೆಸ್ಕ್ ಹಾಗೂ ಬೆಂಚ್ ನೀಡಲು ಅರಣ್ಯ ಸಮಿತಿ ನಿರ್ಣಯ ಕೈಗೊಂಡಿತ್ತು.
ಬುಧವಾರ ಶಾಲೆಗೆ ತೆರಳಿದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್, ಸದಸ್ಯ ಕಾರ್ಯದರ್ಶಿ ಮಂಜುನಾಥ್ ಮತ್ತು ಸದಸ್ಯರಾದ ಗಣೇಶ್ ಭಟ್, ರವಿ ಕೆಳಂಗಡಿ ಮುಖ್ಯಶಿಕ್ಷಕರಿಗೆ ಪೀಠೋಪಕರಣ ಹಸ್ತಾಂತರ ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್, ಸದಸ್ಯ ವೀರೇಂದ್ರ ಅವರು ಶಾಲೆಯ ಶೌಚಗೃಹ, ಅಡುಗೆ ಕೋಣೆ ಮತ್ತಿತರ ಮೂಲ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ವಿವರಿಸಿದರು.