

ಶಿವಮೊಗ್ಗ: ಜೀವ ಉಳಿಸುವ ಮಹಾತ್ಕಾರ್ಯದಲ್ಲಿ ಕೈಜೋಡಿಸಲು ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಗುಂಡಪ್ಪ ಶೆಡ್ ಮುಖ್ಯರಸ್ತೆಯಲ್ಲಿ ಸ್ವರ್ಣವಲ್ಲೀ ಸೀಮಾ ಪರಿಷತ್, ಸ್ವರ್ಣಶ್ರೀ ಟ್ರಸ್ಟ್‌ನಿಂದ ಗುರುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಜನಸಂಖ್ಯೆ ಬೆಳೆದಂತೆ ಬೇರೆ ಬೇರೆ ಕಾರಣಗಳಿಗೆ ರಕ್ತದ ಅವಶ್ಯಕತೆ ಹೆಚ್ಚುವುದು ಸಹಜ. ಆದರೆ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.
ಸ್ವರ್ಣರಶ್ಮೀ ಟ್ರಸ್ಟ್ ಉತ್ತಮ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಟ್ರಸ್ಟ್ ಇನ್ನೂ ಹೆಚ್ಚಿನ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಲಿ ಎಂದು ಆಶಿಸಿದರು. ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಪ್ರದೀಪ ಕುಲಕರ್ಣಿ 138ನೇ ಬಾರಿ, ಸುರೇಶ್ ರಾವ್ 34ನೇ ಬಾರಿ ರಕ್ತದಾನ ಮಾಡಿದರು.
ಸ್ವರ್ಣರಶ್ಮೀ ಟ್ರಸ್ಟ್ ಧರ್ಮದರ್ಶಿ ಅಶೋಕ ಜಿ.ಭಟ್, ಪ್ರಮುಖರಾದ ಡಾ. ಬಾಲಕೃಷ್ಣ ಹೆಗಡೆ, ಟಿ.ಜೆ.ಲಕ್ಷ್ಮೀನಾರಾಯಣ, ಜಯರಾಮ್ ಭಟ್, ಮಧುಮತಿ ಮತ್ತಿತರರಿದ್ದರು.