ಜೀವ ಉಳಿಸಲು ರಕ್ತದಾನ ಮಾಡಿ: ಜಯರಾಮ್ ರಾಯಪುರ್ ಕರೆ

tv
Published on

ಬೆಂಗಳೂರು: ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್‌ ಬೆಂಗಳೂರು ಮತ್ತು ಭಾರತ್‌ ವಿದ್ಯಾ ಸಂಸ್ಥೆ, ಜಯನಗರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿ ದಿನಾಚರಣೆಯನ್ನು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯಪುರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ರಕ್ತದಾನಿಗಳ ಸಂಖ್ಯೆ ಬಹಳ ವಿರಳವಾಗುತ್ತಿದೆ, ಇಂತಹ ನಿಟ್ಟಿನಲ್ಲಿ ಇಂದಿನ ಯುವ ಜನಾಂಗಕ್ಕೆ ಇದರ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದರು.

ದೇಶದ ಯುವಕ, ಯುವತಿಯರು ರಕ್ತದಾನಿಗಳಾಗಿ ಮುಂದೆ ಬಂದರೆ ಇನ್ನೊಂದು ಜೀವಕ್ಕೆ ಜೀವದಾನ ಮಾಡಿ, ಅವರ ಬದುಕಿಗೆ ಬೆಳಕಾಗಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖ ವಾಗಬೇಕಾಗಿದೆ. ಜೊತೆಗೆ ಎಲ್ಲ ದಾನಗಳಿಗಿಂತಲು ರಕ್ತದಾನ ಬಹಳ ಪ್ರಮುಖವಾದದ್ದು ಎಂದು ಹೇಳಿದರು.

ಮನುಷ್ಯ ಹುಟ್ಟಿದಾಗಿನಿಂದಲು ಸಾಯುವವರೆಗು ತಮ್ಮ ಜೀವನದ ಸಾರ್ಥಕತೆ ಪಡೆಯಬೇಕಾದರೆ ಅವನ ಜೀವಿತಾವಧಿಯಲ್ಲಿ ಇನ್ನೊಬ್ಬರ ಬಾಳಿಗೆ ದಾರಿದೀಪವಾಗುವುದಕ್ಕೆ ನಾವುಗಳು ಅಂಗದಾನ, ದೇಹದಾನ ಮತ್ತು ರಕ್ತದಾನ ಮಾಡುವ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದರು. ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಕೂಡ ವಿಶ್ವ ರಕ್ತದಾನಿ ದಿನಾಚರಣೆ ಪ್ರಯುಕ್ತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಕೆ.ಆರ್. ನಿರ್ಮಲ್ ಕುಮಾರ್, ಬಿ.ಸಿ ಶಿವಲಿಂಗೇಗೌಡ, ಡಾ. ಬೈರಮಂಗಲ ರಾಮೇಗೌಡ, ದಿವ್ಯ ಕೆ ಮೂರ್ತಿ, ಹರ್ಷ ಎಲ್‌, ಪ್ರೊಫ್ ಎನ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net