ಗಗನಯಾತ್ರಿಗಳಿಗೆ ನನ್ನ ಜೇಬಿನಿಂದ ಹಣ ನೀಡುತ್ತೇನೆ; ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೀಗೇಳಿದ್ದೇಕೆ? | Donald Trump

Untitled design (43)
Published on

ವಾಷಿಂಗ್ಟನ್​ ಡಿಸಿ: ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಈ ವಾರದ ಆರಂಭದಲ್ಲಿ ಭೂಮಿಗೆ ಮರಳಿದರು. ಇಬ್ಬರೂ ಐಎಸ್‌ಎಸ್ (ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ)ಕ್ಕೆ ಕೇವಲ ಎಂಟು ದಿನಗಳ ಕಾಲ ಹೋಗಿದ್ದರು ಆದರೆ ತಾಂತ್ರಿಕ ದೋಷದಿಂದಾಗಿ ಇಬ್ಬರೂ ಬಾಹ್ಯಾಕಾಶದಲ್ಲಿ ಹೆಚ್ಚುವರಿಯಾಗಿ 278 ದಿನಗಳನ್ನು ಕಳೆಯಬೇಕಾಯಿತು. ಆದರೆ ಬಾಹ್ಯಾಕಾಶದಲ್ಲಿ ಇಷ್ಟು ಸಮಯ ಕಳೆದರೂ ನಾಸಾ ಗಗನಯಾತ್ರಿಗಳಿಗೆ ಹೆಚ್ಚುವರಿ ಸಮಯದ ವೇತನ ಸಿಗುವುದಿಲ್ಲ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)​​ ಪ್ರತಿಕ್ರಿಯಿಸಿದ್ದಾರೆ.

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಳೆದ ದಿನಗಳಿಗೆ ಹೆಚ್ಚುವರಿ ಸಮಯ ವೇತನವನ್ನು ಪಡೆಯುತ್ತಿಲ್ಲ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ಟ್ರಂಪ್ ತಮ್ಮ ಜೇಬಿನಿಂದ ಗಗನಯಾತ್ರಿಗಳಿಗೆ ಹಣ ನೀಡುವುದಾಗಿ ಹೇಳಿದರು. ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್​​, ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ವಿಸ್ತೃತ ವಾಸ್ತವ್ಯಕ್ಕಾಗಿ ಹೆಚ್ಚುವರಿ ಸಮಯದ ವೇತನವನ್ನು ಪಡೆದಿಲ್ಲ, ಬದಲಿಗೆ ಅವರು 286 ದಿನಗಳವರೆಗೆ ದಿನಕ್ಕೆ $5 - ಒಟ್ಟು $1,430 (ರೂ. 1,22,980) ಪಡೆದರು. ಈ ಕುರಿತು ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. ಅಗತ್ಯವಿದ್ದರೆ, ನಾನು ಅವರಿಗೆ ನನ್ನ ಸ್ವಂತ ಜೇಬಿನಿಂದ ಪಾವತಿಸುತ್ತೇನೆ. ಅವರು ಅನುಭವಿಸಿದ್ದನ್ನು ಪರಿಗಣಿಸಿದರೆ ಇದೇನೂ ದೊಡ್ಡ ವಿಷಯವಲ್ಲ ಎಂದು ಗಗನಯಾತ್ರಿಗಳ ಹೆಚ್ಚುವರಿ ಸಮಯದ ವೆಚ್ಚವನ್ನು ತಾನು ಭರಿಸಬಹುದೆಂದು ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.

ಅದೇ ಸಮಯದಲ್ಲಿ ನಾಸಾ ಗಗನಯಾತ್ರಿಗಳನ್ನು ಮರಳಿ ಕರೆತಂದಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್​​, ಎಲಾನ್​ ಮಸ್ಕ್​​ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಮ್ಮಲ್ಲಿ ಎಲಾನ್ ಮಸ್ಕ್​​ ಇಲ್ಲದಿದ್ದರೆ ಗಗನಯಾತ್ರಿಗಳು ದೀರ್ಘಕಾಲ ಅಲ್ಲಿಯೇ ಇರಬೇಕಿತ್ತು. ಬೇರೆ ಯಾರು ಅವರನ್ನು ಕರೆದುಕೊಂಡು ಬರುತ್ತಿದ್ದರು? 9-10 ತಿಂಗಳು ಬಾಹ್ಯಾಕಾಶದಲ್ಲಿ ಇದ್ದ ನಂತರ ದೇಹವು ಕ್ಷೀಣಿಸಲು ಪ್ರಾರಂಭಿಸುತ್ತದೆ. ನಮಗೆ ಸಮಯವಿಲ್ಲದಿದ್ದರೆ ಊಹಿಸಿ? ಈ ಸಮಯದಲ್ಲಿ ಅವರು ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಿತ್ತು ಎಂದು ಹೇಳಿದ್ದಾರೆ. ಗಗನಯಾತ್ರಿಗಳು ಬುಧವಾರ ಮುಂಜಾನೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net