ಬಾಹ್ಯಾಕಾಶದಲ್ಲಿ 9 ತಿಂಗಳ ಹೆಚ್ಚುವರಿ ಕೆಲಸ; ಸುನೀತಾ ವಿಲಿಯಮ್ಸ್ ಸಂಭಾವನೆ ಎಷ್ಟಿರಬಹುದು? | Sunita Williams

Untitled design (12)
Published on

ವಾಷಿಂಗ್ಟನ್ ಡಿಸಿ: ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್( Sunita Williams) ಮತ್ತು ಬುಚ್ ವಿಲ್ಮೋರ್ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದಾರೆ. ಈ ಇಬ್ಬರೂ ಗಗನಯಾತ್ರಿಗಳು ಕೇವಲ ಎಂಟು ದಿನಗಳ ಕಾರ್ಯಾಚರಣೆಗೆ ಹೋಗಿದ್ದರು, ಆದರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ.

ಈ ಇಬ್ಬರು ಗಗನಯಾತ್ರಿಗಳು ಮಾರ್ಚ್ 19ರ ಮೊದಲು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಬಹುದು ಎಂದು ನಿರೀಕ್ಷಿಸಲಾಗಿದೆ. ಅವರಿಬ್ಬರನ್ನೂ ಭೂಮಿಗೆ ಮರಳಿ ತರಲು ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ನೌಕೆ ಕ್ರೂ-10 ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್) ತಲುಪಿದೆ. ಏತನ್ಮಧ್ಯೆ ಅವರು ದೀರ್ಘಕಾಲ ಬಾಹ್ಯಾಕಾಶದಲ್ಲಿ ಇರುವುದಕ್ಕೆ ಪಡೆಯುವ ಮೊತ್ತವು ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.

ನಾಸಾದಲ್ಲಿರುವ ಗಗನಯಾತ್ರಿಗಳು ಸರ್ಕಾರಿ ನೌಕರರಾಗಿದ್ದು ಅವರಿಗೆ ಪ್ರತ್ಯೇಕ ಹೆಚ್ಚುವರಿ ಸಮಯದ ಪಾವತಿ ಇರುವುದಿಲ್ಲ. ಅವರ ಸಂಬಳವು ಅಮೆರಿಕದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ GS-15 ವೇತನ ದರ್ಜೆಯ ಅಡಿಯಲ್ಲಿ ಬರುತ್ತದೆ. ಒಂದು ಉದಾಹರಣೆಯನ್ನು ಉಲ್ಲೇಖಿಸಿ ನಿವೃತ್ತ ಗಗನಯಾತ್ರಿ ಕ್ಯಾಡಿ ಕೋಲ್ಮನ್ ಅವರು ವಿವರಿಸಿದ್ದಾರೆ. 2010-11ರಲ್ಲಿ ತಮ್ಮ 159 ದಿನಗಳ ಕಾರ್ಯಾಚರಣೆಯ ಸಮಯದಲ್ಲಿ ಒಟ್ಟು $636 ( 55,000 ರೂ. ಕ್ಕಿಂತ ಹೆಚ್ಚು) ಹೆಚ್ಚುವರಿ ವೇತನವನ್ನು ಪಡೆದಿದ್ದಾರೆ ಎಂದು ಹೇಳಿದರು.

ಈ ತರ್ಕದ ಪ್ರಕಾರ ಹೋದರೆ, GS-15 ಸರ್ಕಾರಿ ನೌಕರರು ವಾರ್ಷಿಕ ಮೂಲ ವೇತನವನ್ನು $125,133 - $162,672 (ಸರಿಸುಮಾರು 1.08 ಕೋಟಿ ರೂ.- 1.41 ಕೋಟಿ ರೂ.) ವರೆಗೆ ಪಡೆಯುತ್ತಾರೆ. ಇದರ ಪ್ರಕಾರ, ಸುನೀತಾ ವಿಲಿಯಮ್ಸ್ ತಮ್ಮ 9 ತಿಂಗಳ ಸುದೀರ್ಘ ಕಾರ್ಯಾಚರಣೆಗಾಗಿ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಸುಮಾರು 81 ಲಕ್ಷದಿಂದ 1.05 ಕೋಟಿ ರೂ.ಗಳವರೆಗೆ ಸಂಬಳ ಪಡೆಯಲಿದ್ದಾರೆ. ಆದರೆ ಅವರು ಬಾಹ್ಯಾಕಾಶದಲ್ಲಿ ದೀರ್ಘಕಾಲ ಇರುವುದಕ್ಕೆ ಪ್ರತಿಯಾಗಿ ದೊಡ್ಡ ಬೋನಸ್ ಪಡೆಯುತ್ತಾರೆ ಎಂದು ಭಾವಿಸಿದರೆ ಈ ತಪ್ಪು ಕಲ್ಪನೆ.

ಬಾಹ್ಯಾಕಾಶ ನೌಕೆಗಳಿಂದಾಗುವ ಅಪಾಯಗಳೇನು?

ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಸುಮಾರು 3 ಗಂಟೆಗಳಲ್ಲಿ 400 ಕಿ.ಮೀ ದೂರವನ್ನು ಕ್ರಮಿಸಿ ಅಟ್ಲಾಂಟಿಕ್ ಸಾಗರ ಅಥವಾ ಮೆಕ್ಸಿಕೋ ಕೊಲ್ಲಿಯಲ್ಲಿ ಬೀಳಲಿದೆ. ಆದರೆ ಭೂಮಿಗೆ ಮರಳುವುದು ಅಷ್ಟು ಸುಲಭವಲ್ಲ. ತಜ್ಞರ ಪ್ರಕಾರ, ಡ್ರ್ಯಾಗನ್ ಕ್ಯಾಪ್ಸುಲ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಅದರ ಕೋನವು ಸಂಪೂರ್ಣವಾಗಿ ಸರಿಯಾಗಿರಬೇಕು.

ಒಂದು ಸಣ್ಣ ತಪ್ಪು ಕೂಡ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಇದಕ್ಕೂ ಮುಂಚೆಯೂ ಬಾಹ್ಯಾಕಾಶ ಯಾತ್ರೆಗಳ ಸಮಯದಲ್ಲಿ ತಪ್ಪು ಪ್ರವೇಶ ಕೋನದಿಂದಾಗಿ ಸಿಬ್ಬಂದಿ ತೊಂದರೆಗಳನ್ನು ಎದುರಿಸಿದ್ದಾರೆ. ಮಾಹಿತಿಯ ಪ್ರಕಾರ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ಅವರನ್ನು ಬದಲಿಸಿ, ಆನ್ ಮೆಕ್ಲೇನ್, ನಿಕೋಲ್ ಅಯರ್ಸ್, ಟಕುಯಾ ಒನಿಶಿ ಮತ್ತು ಕಿರಿಲ್ ಪೆಸ್ಕೋವ್ ಈಗ ಐಎಸ್​ಎಸ್​​ನಲ್ಲಿ ಹೊಸ ಕಾರ್ಯಾಚರಣೆಯನ್ನು ವಹಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net