

ವಾಷಿಂಗ್ಟನ್ ಡಿಸಿ: ಕರೊನಾ ಸೋಂಕಿನಿಂದ ತೀವ್ರ ಹೊಡೆತಕ್ಕೆ ಒಳಗಾದ ದೇಶಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಅಲ್ಲಿ ಪ್ರತಿದಿನ ದಾಖಲೆಯ ಸಂಖ್ಯೆಯಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.
ಇಡೀ ರಾಷ್ಟ್ರಾದ್ಯಂತ ಕರೊನಾ ವೈರಸ್ ಹೆಚ್ಚುತ್ತಿದ್ದರೂ ಕೂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ, ಚುನಾವಣೆ ಪ್ರಚಾರಕ್ಕೆ ತೆರಳುವಾಗಲೂ ಅವರು ಮಾಸ್ಕ್ ಹಾಕಿಕೊಂಡಿರಲಿಲ್ಲ.
ಆದರೆ ಕಳೆದ ವಾರ ಆಸ್ಪತ್ರೆಯೊಂದಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಮಾಸ್ಕ್ ಧರಿಸಿಕೊಂಡಿದ್ದರು. ಅಮೆರಿಕ ಅಧ್ಯಕ್ಷರು ಮಾಸ್ಕ್ ಹಾಕಿಕೊಂಡಿದ್ದೇ ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಡೊನಾಲ್ಡ್ ಟ್ರಂಪ್ ಅವರು ಮಾಸ್ಕ್ ವಿಚಾರದ ಬಗ್ಗೆ ಟ್ವೀಟ್ ಮಾಡಿ ಇನ್ನೊಂದು ಸುದ್ದಿ ಮಾಡಿದ್ದಾರೆ. ಇದನ್ನೂ ಓದಿ: ಪಾಂಡ್ಯ ಸಹೋದರರ ಜತೆ ಧೋನಿ ಬರ್ತ್ ಡೇ ಸೆಲೆಬ್ರೇಷನ್ ಫೋಟೋ ರಿಲೀಸ್ ಮಾಡಿದ ಸಾಕ್ಷಿ
ಕಣ್ಣಿಗೆ ಕಾಣದ ಚೀನಾ ವೈರಸ್ ವಿರುದ್ದ ಹೋರಾಡಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡುತ್ತಿದ್ದೇವೆ. ಕರೊನಾ ಸಂದರ್ಭದಲ್ಲಿ ಮಾಸ್ಕ್ ಧರಿಸುವುದೂ ಕೂಡ ದೇಶಭಕ್ತಿ ತೋರಿಸಿದಂತೆ ಎಂದು ಅನೇಕರು ಹೇಳಿದ್ದಾರೆ. ಈಗ ಹೇಳುತ್ತಿದ್ದೇನೆ...ನನ್ನಂತಹ ದೊಡ್ಡ ದೇಶಭಕ್ತ ಇನ್ಯಾರೂ ಇಲ್ಲ. ನಾನು ನಿಮ್ಮ ನೆಚ್ಚಿನ ಅಧ್ಯಕ್ಷ ಎಂದು ಟ್ವೀಟ್ ಮಾಡಿ, ಮಾಸ್ಕ್ ಧರಿಸಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ‘ಪೊರಕೆ’ಗಾಗಿ ತಹಸೀಲ್ದಾರ್ ಸಮ್ಮುಖದಲ್ಲೇ ಅಧಿಕಾರಿಗಳ ಕಿತ್ತಾಟ!
ಕಳೆದ ವಾರ ಅವರು ಮಿಲಿಟಿರಿ ಮೆಡಿಕಲ್ ಸೆಂಟರ್ಗೆ ಭೇಟಿಕೊಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಮಾಸ್ಕ್ ಧರಿಸಿದ್ದು. ಅಲ್ಲಿಯೇ ತೆಗೆದ ಫೋಟೋವನ್ನು ಈಗ ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೊವಿಡ್-19 ನಿಂದ ಪಾರಾಗಲು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ತುಂಬ ಮುಖ್ಯ ಎಂದು ಆರೋಗ್ಯ ತಜ್ಞರೇ ಹೇಳಿದ್ದರೂ ಅಮೆರಿಕ ಅಧ್ಯಕ್ಷರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಕೊವಿಡ್-19 ವಾರಿಯರ್ಸ್ ಜತೆ ಸಂವಾದ ನಡೆಸುವಾಗಲೂ ಅವರು ಮಾಸ್ಕ್ ಧರಿಸಿರಲಿಲ್ಲ. ಈ ಬಗ್ಗೆ ತುಂಬ ಟೀಕೆಯನ್ನೂ ಎದುರಿಸಿದ್ದರು. ಮಾದರಿಯಾಗಬೇಕಾದ ಅಧ್ಯಕ್ಷರೇ ಹೀಗಾಡುತ್ತಿದ್ದಾರೆ. ಅವರಿಗೆ ದೇಶದ ಬಗ್ಗೆ ಕಾಳಜಿಯಿಲ್ಲ ಎಂಬ ಮಾತುಗಳೂ ವ್ಯಕ್ತವಾಗಿದ್ದವು.(ಏಜೆನ್ಸೀಸ್)