

Donald Trump : ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ವೈರಲ್ ವಿಡಿಯೋ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಇಂತಹ ವಿಷಯಗಳು ಸಂಭವಿಸಿದಾಗ, ಬಾಗಿಲುಗಳು ಮುಚ್ಚಿವೆಯೇ ಅಥವಾ ತೆರೆದಿವೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ಹಾಗೆ ಮಾಡಿದ್ದರೆ, ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಇರುತ್ತಿರಲಿಲ್ಲ ಎಂದು ಟ್ರಂಪ್ ನಗೆ ಚಟಾಕಿ ಹಾರಿಸಿದರು.
ಅಧ್ಯಕ್ಷ ಮ್ಯಾಕ್ರನ್ ಅವರ ಪತ್ನಿ ಬ್ರಿಗೆಟ್ಟಾ, ಗಂಡನ ಮೂತಿಗೆ ತಿವಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿ, ಎಲ್ಲರ ಹುಬ್ಬೇರಿಸಿತ್ತು. ಇತ್ತೀಚೆಗೆ ಓವಲ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು ಟ್ರಂಪ್ ಅವರನ್ನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಟ್ರಂಪ್, ನಾನು ಈ ಬಗ್ಗೆ ಮ್ಯಾಕ್ರನ್ ಅವರೊಂದಿಗೆ ನೇರವಾಗಿ ಮಾತನಾಡಿದೆ. ಎಲ್ಲವೂ ಸರಿಯಾಗಿದೆ ಎಂದು ಅವರು ಹೇಳಿದರು. ಅಂತಹ ಘಟನೆಗಳು ಸಂಭವಿಸಿದಾಗ, ಬಾಗಿಲುಗಳು ಮುಚ್ಚಿವೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು ಎಂದು ಟ್ರಂಪ್ ನಗುತ್ತಾ ಉತ್ತರಿಸಿದರು.
ಅಂದಹಾಗೆ, ಮ್ಯಾಕ್ರನ್ ಮತ್ತು ಬ್ರಿಗೆಟ್ಟಾ ಅವರ ವಿಯೆಟ್ನಾಂ ಪ್ರವಾಸದ ಸಮಯದಲ್ಲಿ ಹನೋಯ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆಯಿತು. ವಿಮಾನ ಹನೋಯ್‌ನಲ್ಲಿ ಇಳಿದ ನಂತರ, ಅಧಿಕಾರಿಯೊಬ್ಬರು ಬಾಗಿಲು ತೆರೆದರು. ಈ ವೇಳೆ ಮ್ಯಾಕ್ರನ್ ಒಬ್ಬರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತು. ಆ ಕ್ಷಣದಲ್ಲಿ, ಕೆಂಪು ಧಿರಿಸು ಧರಿಸಿದ್ದ ಎರಡು ಕೈಗಳು ಅವರ ಮ್ಯಾಕ್ರನ್ ಮೂತಿಯನ್ನು ತಿವಿದವು. ಆರಂಭದಲ್ಲಿ ಯಾರೂ ಅಂತಾ ಗೊತ್ತಾಗಲಿಲ್ಲ. ಇದು ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿದ ಮ್ಯಾಕ್ರನ್, ನಗುತ್ತಾ ಕ್ಯಾಮೆರಾ ಕಡೆ ಕೈ ಬೀಸಿದರು.
ಇದಾದ ನಂತರ, ಮ್ಯಾಕ್ರನ್ ಪತ್ನಿ ಬ್ರಿಗೆಟ್ಟಾ, ಕೆಂಪು ಜಾಕೆಟ್ ಧರಿಸಿ, ವಿಮಾನದ ಮೆಟ್ಟಿಲುಗಳಿಂದ ಮ್ಯಾಕ್ರನ್ ಜತೆ ಇಳಿಯುತ್ತಿರುವ ದೃಶ್ಯ ಕಂಡುಬಂತು. ಹೀಗಾಗಿ, ಮೂತಿ ತಿವಿದಿದ್ದು, ಮ್ಯಾಕ್ರನ್ ಪತ್ನಿ ಎಂಬುದು ಖಚಿತವಾಯಿತು. ಎಷ್ಟೇ ದೊಡ್ಡ ಸ್ಥಾನದಲ್ಲೇ ಇರಲಿ ಆತ ಹೆಂಡತಿ ಮುಂದೆ ತಲೆಬಾಗಲೇಬೇಕು ಎಂಬ ಮಾತುಗಳು ಕೇಳಿಬಂದವು.
ನಂತರ, ಈ ಘಟನೆಗೆ ಮ್ಯಾಕ್ರನ್ ಪ್ರತಿಕ್ರಿಯಿಸುತ್ತಾ, ಎಲ್ಲರೂ ನಮ್ಮನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ನಮ್ಮ ನಡುವೆ ಯಾವುದೇ ದ್ವೇಷವಿಲ್ಲ. ನಂತರ ನಾನು ನನ್ನ ಹೆಂಡತಿಯೊಂದಿಗೆ ತಮಾಷೆ ಮಾಡಿದೆ. ಇದು ನಮ್ಮ ನಡುವೆ ಯಾವಾಗಲೂ ನಡೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. (ಏಜೆನ್ಸೀಸ್)