

Nicolas Maduro: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸುಳಿವು ನೀಡಿದವರಿಗೆ 437 ಕೋಟಿ ರೂ. ನೀಡುವುದಾಗಿ ಅಮೆರಿಕ ಸರ್ಕಾರ ಬಂಪರ್ ಆಫರ್ ಘೋಷಿಸಿದೆ. ಈತನ ಬಂಧನಕ್ಕೆ ಮಾಹಿತಿ ನೀಡುವ ಮತ್ತು ಸಹಾಯ ಮಾಡುವವರಿಗೆ 50 ಮಿಲಿಯನ್ ಡಾಲರ್ (437 ಕೋಟಿ ರೂ.) ಕೊಡಲಾಗುವುದು ಎಂದು ಅಮೆರಿಕದ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ವಿಡಿಯೊ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್, ನಿಕೋಲಸ್ ಮಡುರೊ ಪತ್ತೆಗಾಗಿ 15 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದರು. ಆ ನಂತರದಲ್ಲಿ ಜೋ ಬೈಡನ್ ಸರ್ಕಾರ ಅದನ್ನು 25 ಮಿಲಿಯನ್ ಡಾಲರ್ಗೆ ಹೆಚ್ಚಿಸಿತು. ಈಗ, ಟ್ರಂಪ್ ಆಡಳಿತವು ಆ ಬಹುಮಾನವನ್ನು ಮತ್ತೇ ದ್ವಿಗುಣಗೊಳಿಸಿದ್ದು, ಬರೋಬ್ಬರಿ 50 ಮಿಲಿಯನ್ ಡಾಲರ್ಗೆ ಹೆಚ್ಚಿಸಿದೆ. ಇದರೊಂದಿಗೆ ಆತನನ್ನು ಸೆರೆಹಿಡಿಯಲು ಸಹಾಯ ಮಾಡುವಂತೆ ತಿಳಿಸಿದೆ.
ಅಮೆರಿಕ ಅಟಾರ್ನಿ ಜನರಲ್ ಪಂಬೊಂಡಿ ಹೇಳಿಕೆ ಪ್ರಕಾರ, "ನಿಕೋಲಸ್ ಮಡುರೊ ಎಂಬ ವ್ಯಕ್ತಿ ಟ್ರೆನ್ ಡಿ ಅರಾಗುವಾ, ಸಿನಾಲೋವಾ ಮತ್ತು ಕಾರ್ಟೆಲ್ ಆಫ್ ದಿ ಸನ್ಸ್ (ಕಾರ್ಟೆಲ್ ಡಿ ಸೊಲೈಲ್) ನಂತಹ ಭಯೋತ್ಪಾದಕ ಸಂಘಟನೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಘೋರ ಹಿಂಸಾಚಾರವನ್ನು ನಡೆಸುತ್ತಿದ್ದಾನೆ. ಆತ ವಿಶ್ವದ ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆದಾರರಲ್ಲಿ ಒಬ್ಬ" ಎಂದಿದ್ದಾರೆ.
"ಅಮೆರಿಕಕ್ಕೆ ಫೆಂಟನಿಲ್ ಮತ್ತು ಇತರ ಮಾದಕ ದ್ರವ್ಯಗಳನ್ನು ಬೆರೆಸಿದ ಕೊಕೇನ್ ಅನ್ನು ಪೂರೈಸುವ ಮೂಲಕ ಡ್ರಗ್ ಜಾಲಗಳಲ್ಲಿ ತೊಡಗಿದ್ದಾನೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಮಡುರೊ ಯಾವುದೇ ಸಂದರ್ಭದಲ್ಲೂ ಟ್ರಂಪ್ ಆಡಳಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಡುರೊ ಅಪರಾಧಗಳಿಗೆ ಶಿಕ್ಷೆಯಾಗಬೇಕು" ಎಂದು ಪಂಬೊಂಡಿ ಹೇಳಿದ್ದಾರೆ.
ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಸಂಘರ್ಷ ಹೊಸದೇನಲ್ಲ. 2020ರಿಂದ, ಮಡುರೊ ಮೇಲೆ ಮಾದಕ ದ್ರವ್ಯ ಭಯೋತ್ಪಾದನೆ ಮತ್ತು ಕೊಕೇನ್ ಕಳ್ಳಸಾಗಣೆ ಆರೋಪವಿದೆ. ಅವರ ಮೇಲೆ ಯುನೈಟೆಡ್ ಸ್ಟೇಟ್ಸ್ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಇದು ರಾಜತಾಂತ್ರಿಕ ಒತ್ತಡವನ್ನೂ ತಂದಿದೆ. ಆದಾಗ್ಯೂ, 2024ರಲ್ಲಿ, ಮಡುರೊರನ್ನು ವೆನೆಜುವೆಲಾದ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು. ಇದನ್ನು ಖಂಡಿಸಿರುವ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಅನೇಕ ಲ್ಯಾಟಿನ್ ಅಮೇರಿಕನ್ ದೇಶಗಳು ಚುನಾವಣೆಯನ್ನು ಅಕ್ರಮ ಎಂದು ಬಣ್ಣಿಸಿವೆ,(ಏಜೆನ್ಸೀಸ್).