

ರಾಯಚೂರು: ಸೇವಾ ನ್ಯೂನತೆ ಎಸಗಿದ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳಾದ ಜೊಮ್ಯಾಟೊ ಹಾಗೂ ಡಾಮಿನೋಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ 40 ಸಾವಿರ ರೂ. ದಂಡ ವಿಧಿಸಿದೆ.
ನಗರದ ನಿವಾಸಿ ವಿದ್ಯಾಶ್ರೀ ಎಂಬುವರು 2024, ಮಾ.17ರಂದು ಸಂಜೆ 7 ಗಂಟೆಗೆ ಡಾಮಿನೋಸ್ ಪಿಜ್ಜಾಕ್ಕಾಗಿ ಜೊಮ್ಯಾಟೊ ಮೂಲಕ 337.45 ರೂ. ಹಣ ನೀಡಿ ಆರ್ಡರ್ ಮಾಡಿದ್ದರು. ಆರ್ಡರ್ ಸ್ವೀಕರಿಸಿರುವ ಕುರಿತು ಅವರಿಗೆ ಸ್ವೀಕೃತಿ ಬಂದಿತ್ತು. ಹೀಗಾಗಿ ಪಿಜ್ಜಾಗಾಗಿ ವಿದ್ಯಾಶ್ರೀ ಹಾಗೂ ಅವರ ಮಗಳು ರಾತ್ರಿ 9 ಗಂಟೆಯವರೆಗೆ ಕಾದರೂ ಜೊಮ್ಯಾಟೊದಿಂದ ಮಾತ್ರ ಪಿಜ್ಜಾ ಆರ್ಡರ್ ಡೆಲಿವರಿ ಆಗಿರಲಿಲ್ಲ.
ಕಾದು ಕಾದು ಸುಸ್ತಾಗಿ ಜೊಮ್ಯಾಟೊಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ, ನಿಮ್ಮ ಪಿಜ್ಜಾ ಸಿದ್ದವಾಗುತ್ತಿದೆ ಎಂಬ ಉತ್ತರ ಬಂದಿದೆ. ಮತ್ತೆ ತಾಯಿ, ಮಗಳು ಡೆಲಿವರಿಗೆ ಕಾದಿದ್ದಾರೆ. ಆದರೂ ಪಿಜ್ಜಾ ಬರಲೇ ಇಲ್ಲ. ಆದರೆ ವಿದ್ಯಾಶ್ರೀ ಮೊಬೈಲ್ ಹಣ ಪಾವತಿಸಿರುವ ಮತ್ತು ಪಿಜ್ಜಾ ಸ್ವೀಕರಿಸಿರುವ ಸಂದೇಶ ಬಂದಿದೆ. ಆರ್ಡರ್ ಕೈಗೆ ಹಸ್ತಾಂತರವಾಗುವ ಮುನ್ನವೇ ಈ ಸಂದೇಶವನ್ನು ಯಾಕೆ ಕಳುಹಿಸಿದ್ದಾರೆಂದು ಮತ್ತೆ ವಿಚಾರಿಸಿದ್ದಾರೆ. ಆಗ, ನಿಮ್ಮ ಆರ್ಡರ್ ನೀಡಲು ಸಮಸ್ಯೆಯಾಗಿದೆ ಎಂದು ಡೆಲಿವರಿ ಸಂಸ್ಥೆ ಹೇಳಿದೆ.
ಇದರಿಂದ ತೀರ ಬೇಸತ್ತ ಗ್ರಾಹಕರು ತಮಗೆ ಎದುರಾದ ಸೇವಾ ನ್ಯೂನತೆಯಿಂದ ಉಂಟಾದ ಮಾನಸಿಕ ವ್ಯಥೆಗೆ ಪರಿಹಾರ ಕೋರಿ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಗ್ರಾಹಕರ ದೂರಿನ ಮೇಲೆ ಪರಿಹಾರ ಆಯೋಗ, ರಾಯಚೂರಿನ ಜೊಮ್ಯಾಟೊ ಹಾಗೂ ಬೆಂಗಳೂರಿನ ಡಾಮಿನೋಸ್ ಕಂಪನಿಗೆ ನೋಟಿಸ್ ರವಾನಿಸಿತ್ತು. ನೋಟೀಸ್ ಸ್ವೀಕರಿಸಿದ್ದರೂ ಆಯೋಗದ ಮುಂದೆ ಜೊಮ್ಯಾಟೊ ಮತ್ತು ಡಾಮಿನೋಸ್ನಿಂದ ಯಾರೊಬ್ಬರು ಹಾಜರಾಗಿರಲಿಲ್ಲ.
ದೂರುದಾರರು ನೀಡಿರುವ ದಾಖಲೆಗಳು, ಸಾಕ್ಷಿಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರ ಕುಮಾರ್ ಹಾಗೂ ಸದಸ್ಯ ಪ್ರಭುದೇವ ಪಾಟೀಲ್, ದೂರುದಾರರಿಗೆ ಉಂಟಾದ ಮಾನಸಿಕ ವ್ಯಥೆ ಹಾಗೂ ಸೇವಾ ನ್ಯೂನತೆಯ ಹಿನ್ನಲೆ ಎರಡು ಸಂಸ್ಥೆಗಳು ಜಂಟಿಯಾಗಿ 40 ಸಾವಿರ ರೂ. ದಂಡ ಪಾವತಿಸುವಂತೆ ಜೊಮ್ಯಾಟೊ ಹಾಗೂ ಡಾಮಿನೋಸ್ ಸಂಸ್ಥೆಗೆ ಆದೇಶಿಸಿದ್ದಾರೆ ಎಂದು ಜಿಲ್ಲಾ ಆಯೋಗದ ಸಹಾಯಕ ರಿಜಿಸ್ಟರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಅಣ್ಣರಾವ್ ಹಾಬಾಳಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.