

ಬ್ರಿಟಿಷ್-ಭಾರತೀಯ ರಾಜಕಾರಣಿ ರಿಷಿ ಸುನಕ್ ಬ್ರಿಟನ್ನ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರೂ, ಭಾರತೀಯರು ಸಂತಸಪಡಲು ಕಾರಣವಿದೆ. ಲೇಬರ್ ಮತ್ತು ಕನ್ಸರ್ವೆಟಿವ್ ಪಕ್ಷಗಳ ಭಾರತೀಯ ಮೂಲದ 26 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸದ್ಯದ ಹೌಸ್ ಆಫ್ ಕಾಮನ್ಸ್ನಲ್ಲಿ ಭಾರತ ಮೂಲದ 15 ಸಂಸದರಿದ್ದರು. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ 14 ವರ್ಷಗಳ ನಂತರ ಕನ್ಸರ್ವೆಟಿವ್ ಪಕ್ಷವನ್ನು ಸೋಲಿಸಿ, ಪ್ರಚಂಡ ಗೆಲುವು ಸಾಧಿಸಿದೆ. ಈ ಸಲದ ಚುನಾವಣೆಯಲ್ಲಿ ಭಾರತ ಮೂಲದ 107 ಅಭ್ಯರ್ಥಿಗಳು ಕಣದಲ್ಲಿದ್ದರು.
2021ರ ಜನಗಣತಿಯ ಪ್ರಕಾರ, ಯುನೈಟೆಡ್ ಕಿಂಗ್ಡಮ್ಲ್ಲಿ ತಮ್ಮನ್ನು ಹಿಂದುಗಳು ಎಂದು ಗುರುತಿಸಿಕೊಳ್ಳುವ ಒಂದು ಮಿಲಿಯನ್ ಜನರಿದ್ದಾರೆ ಮತ್ತು ಇದು ಮೂರನೇ ಅತಿದೊಡ್ಡ ಧಾರ್ವಿುಕ ಗುಂಪೆನ್ನುವುದು ಗಮನಾರ್ಹ. 2019ರ ಚುನಾವಣೆಯಲ್ಲಿ ಭಾರತ-ವಿರೋಧಿ ನಿಲುವಿನಿಂದಾಗಿ ಭಾರತೀಯ ಮೂಲದ ಮತದಾರರು ಲೇಬರ್ ಪಕ್ಷವನ್ನು ತಿರಸ್ಕರಿಸಿದ್ದರು. ಆದರೆ, ಕೀರ್ ಸ್ಟಾರ್ಮರ್ ನೇತೃತ್ವದಲ್ಲಿ ತನ್ನ ನಿಲುವು ಬದಲಿಸಿಕೊಂಡ ಪಕ್ಷ, ಈ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ಭಾರತೀಯ ಮೂಲದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಮತ್ತು ಭಾರತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ಲೇಬರ್ ಪಾರ್ಟಿಯಿಂದಲೇ ಆಯ್ಕೆಯಾಗಿರುವುದು ವಿಶೇಷ. ಚುನಾವಣೆಯಲ್ಲಿ ಗೆದ್ದ ಭಾರತೀಯ ಮೂಲದ ಕೆಲವು ಸಂಸದರ ಮಾಹಿತಿ ಇಲ್ಲಿದೆ
ರಿಷಿ ಸುನಕ್: ನಿರ್ಗಮಿತ ಪ್ರಧಾನಮಂತ್ರಿ ರಿಷಿ ಸುನಕ್ ನೇತೃತ್ವದ ಕನ್ಸರ್ವೆಟಿವ್ ಪಕ್ಷ ಚುನಾವಣೆಯಲ್ಲಿ ಸೋತರೂ, ಸುನಕ್ ತಮ್ಮ ಉತ್ತರ ಇಂಗ್ಲೆಂಡ್ನ ರಿಚ್ವುಂಡ್ ಅಂಡ್ ನಾರ್ತಲ್ಲರ್ಟನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿ ಪಟೇಲ್: ಕನ್ಸರ್ವೆಟಿವ್ ಪಕ್ಷದ ಪ್ರೀತಿ, ಬ್ರಿಟನ್ ಚುನಾವಣೆಯಲ್ಲಿ ಎಸ್ಸೆಕ್ಸ್ನಲ್ಲಿರುವ ತಮ್ಮ ವಿಥಮ್ ಸ್ಥಾನ ಉಳಿಸಿಕೊಂಡಿದ್ದಾರೆ. ಪಟೇಲ್ ಅವರು ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿಯಾಗಿ 2019ರಿಂದ 2022ರವರೆಗೆ ಕಾರ್ಯ ನಿರ್ವಹಿಸಿದ್ದರು. 2010ರ ಮೇ ತಿಂಗಳಿಂದ ವಿಥಮ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದ ಪ್ರತಿನಿಧಿಯಾಗಿದ್ದಾರೆ.
ವಲೇರಿ ವ್ಯಾಜ್ : ಲೇಬರ್ ಪಕ್ಷದ ರಾಜಕಾರಣಿ ಮತ್ತು ಸಾಲಿಸಿಟರ್ ಆಗಿರುವ ವ್ಯಾಲೆರಿ ವಾಜ್, ವಾಲ್ಸಾಲ್ ಮತ್ತು ಬ್ಲೋಕ್ಸ್ವಿಚ್ ಸೀಟನ್ನು ಗೆದ್ದಿದ್ದಾರೆ. 2010ರಿಂದ ವಾಲ್ಸಾಲ್ ಸೌತ್ನ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತನ್ವುನ್ಜೀತ್ ಸಿಂಗ್ ಧೇಸಿ: ಸ್ಲೋವ್ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ. 2017ರ ಸಾರ್ವತ್ರಿಕ ಚುನಾವಣೆಯಲ್ಲಿ 17,000 ಮತದೊಂದಿಗೆ ಸ್ಲೋವ್ ಕ್ಷೇತ್ರವನ್ನು ಗೆದ್ದಿದ್ದರು ಮತ್ತು 2019ರಲ್ಲೂ ಮರು ಆಯ್ಕೆಯಾದರು. ಯುರೋಪಿಯನ್ ಪಾರ್ಲಿಮೆಂಟ್ವೊಂದರಲ್ಲಿ ಮೊದಲ ಪೇಟಧಾರಿ ಸಿಖ್ ಸಂಸದ ಎಂಬ ಖ್ಯಾತಿಗೆ ಸಿಂಗ್ ಪಾತ್ರರಾಗಿದ್ದಾರೆ.
ಲಂಡನ್: ಲೇಬರ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಬ್ರಿಟನ್ ಮತದಾರರಿಗೆ ಹಿಂದುಸ್ ಫಾರ್ ಲೇಬರ್ ಸಂಘಟನೆಯ ಮುಖ್ಯಸ್ಥ, ಕನ್ನಡಿಗ ಡಾ. ನೀರಜ್ ಪಾಟೀಲ್ ಕೃತಜ್ಞತೆ ಅರ್ಪಿಸಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಆರು ಪ್ರಮುಖ ಭರವಸೆಗಳನ್ನು ಮತದಾರರಿಗೆ ನೀಡಲಾಗಿದೆ. ಆರ್ಥಿಕ ಭದ್ರತೆ, ರಾಷ್ಟ್ರೀಯ ಆರೋಗ್ಯ ಯೋಜನೆಯಲ್ಲಿ ಕಾಯುವ ಅವಧಿಯನ್ನು ಕಡಿಮೆ ಮಾಡುವುದು, ಗಡಿ ಭದ್ರತೆಗೆ ಹೊಸ ಪಡೆ ರೂಪಿಸುವುದು, 6500 ಶಿಕ್ಷಕರ ನೇಮಕ, ಸಮಾಜವಿರೋಧಿ ವರ್ತನೆಗೆ ತಡೆ ಒಡ್ಡುವುದು ಮುಂತಾದ ಭರವಸೆಗಳು ಇದರಲ್ಲಿ ಸೇರಿವೆ. ಅವುಗಳನ್ನು ಈಡೇರಿಸಲು ಪಕ್ಷ ಬದ್ಧವಾಗಿದೆ ಎಂದು ಡಾ. ನೀರಜ್ ಪಾಟೀಲ್ ಹೇಳಿದ್ದಾರೆ.
ಸತ್ವೀರ್ ಕೌರ್: ಲೇಬರ್ ಪಾರ್ಟಿಯ ಸತ್ವೀರ್ ಕೌರ್ ಸೌತಾಂಪ್ಟನ್ ಟೆಸ್ಟ್ ಸ್ಥಾನ ಗೆದ್ದಿದ್ದಾರೆ. 2011ರಲ್ಲಿ ಅವರು ಲೇಬರ್ ಪಕ್ಷಕ್ಕೆ ಸೇರಿದರು.
ಸೋಜನ್ ಜೋಸೆಫ್: ಲೇಬರ್ ಪಕ್ಷದ ಸೋಜನ್ ಜೋಸೆಫ್ ಆಶ್ಫೋರ್ಡ್ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕೇರಳದ ಕೊಟ್ಟಾಯಂನಲ್ಲಿರುವ ಅವರ ನಿವಾಸದಲ್ಲಿ ಸಂಭ್ರಮಾಚರಣೆ ನಡೆದಿದೆ. ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಕೇರಳ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದ್ದು. ಕೆಂಟ್ನ ಆಶ್ಫೋರ್ಡ್ನಲ್ಲಿ ಸೋಜನ್ 1779 ಮತಗಳಿಂದ ಡೇಮಿಯನ್ ಗ್ರೀನ್ ಅವರನ್ನು ಸೋಲಿಸಿದರು. ರಾಷ್ಟ್ರೀಯ ಆರೋಗ್ಯ ಸೇವೆ (ಘಏಖ) ವಿಭಾಗದಲ್ಲಿ ಮಾನಸಿಕ ಆರೋಗ್ಯ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊಟ್ಟಾಯಂ ಮನ್ನಾನಂ ಕೆ ಇ ಕಾಲೇಜಿನಿಂದ ಪದವಿ ಪಡೆದಿರುವ ಸೋಜನ್, ಬೆಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮುಗಿಸಿ 2001ರಲ್ಲಿ ಯುಕೆಗೆ ವಲಸೆ ಬಂದಿದ್ದರು. ಬ್ರಿಟನ್ನಲ್ಲಿ ತಮ್ಮ ನರ್ಸಿಂಗ್ ವೃತ್ತಿಯನ್ನು ಪ್ರಾರಂಭಿಸಿದರು. ಸೋಜನ್ ಪತ್ನಿ ಬ್ರೖೆಟಾ ಜೋಸೆಫ್ ಕೂಡ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಲೀಸಾ ನಂದಿ: ಲೇಬರ್ ಪಾರ್ಟಿಯ ಲೀಸಾ ನಂದಿ, 2010ರಿಂದ ಪ್ರತಿನಿಧಿಸುತ್ತಿರುವ ವಿಗಾನ್ ಸ್ಥಾನ ಉಳಿಸಿಕೊಂಡಿದ್ದಾರೆ. ಲೀಸಾ ತಂದೆ ದೀಪಕ್ ನಂದಿ ಕೋಲ್ಕತಾದಲ್ಲಿ ಜನಿಸಿದ್ದರು.
ಕ್ಲೇರ್ ಕುಟಿನ್ಹೋ: ಕನ್ಸರ್ವೆಟಿವ್ ಪಕ್ಷದ ಕುಟಿನ್ಹೋ, ಪೂರ್ವ ಸರ್ರೆ ಕ್ಷೇತ್ರದಿಂದ ಗೆದ್ದಿದ್ದಾರೆ. ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿದ್ದ ಕುಟಿನ್ಹೋ 1985ರಲ್ಲಿ ಲಂಡನ್ನಲ್ಲಿ ಜನಿಸಿದರು. 2019ರಿಂದ 2024ರವರೆಗೆ ಪೂರ್ವ ಸರ್ರೆ ಕ್ಷೇತ್ರದ ಸಂಸತ್ ಸದಸ್ಯೆಯಾಗಿದ್ದ ಕುಟಿನ್ಹೋ, ರಿಷಿ ಸುನಕ್ ಆಪ್ತಕೂಟದಲ್ಲಿದ್ದ ರಾಜಕಾರಣಿಗಳಲ್ಲಿ ಪ್ರಮುಖರು.
ಪ್ರೀತ್ ಗೌರ್ ಗಿಲ್: ಲೇಬರ್ ಪಾರ್ಟಿಯಿಂದ ಪ್ರೀತ್ ಕೌರ್ ಗಿಲ್ ಬರ್ವಿುಂಗ್ಹಾ್ಯಮ್ ಎಡ್ಜ್ಬಾಸ್ಟನ್ ಸ್ಥಾನದಿಂದ ಮರು ಆಯ್ಕೆಯಾಗಿದ್ದಾರೆ. ಸಂಸತ್ತಿನ ಮೊದಲ ಬ್ರಿಟಿಷ್ ಸಿಖ್ ಮಹಿಳಾ ಸದಸ್ಯೆಯಾಗಿರುವ ಗಿಲ್, ಸಾರ್ವಜನಿಕ ಆರೋಗ್ಯ ವಿಭಾಗದ ಸಚಿವೆಯಾಗಿದ್ದರು.
ನವೇಂದು ಮಿಶ್ರಾ: ಲೇಬರ್ ಪಾರ್ಟಿಯ ನವೆಂದು ಮಿಶ್ರಾ ಸ್ಟಾಕ್ಪೋರ್ಟ್ ಸ್ಥಾನ ಗೆದ್ದಿದ್ದಾರೆ. ಅವರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಟಾಕ್ಪೋರ್ಟ್ನ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಿಶ್ರಾ ಅವರ ತಾಯಿ ಉತ್ತರಪ್ರದೇಶದ ಗೋರಖ್ಪುರದವರು ಮತ್ತು ತಂದೆ ಕಾನ್ಪುರದವರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಮಿಶ್ರಾ ಸ್ಟಾಕ್ಪೋರ್ಟ್ನಲ್ಲಿ ಟ್ರೇಡ್ ಯೂನಿಸ್ಟ್ ಆಗಿದ್ದರು.
ಸೀಮಾ ಮಲ್ಹೋತ್ರಾ: ಫೆಲ್ತಾಮ್ ಮತ್ತು ಹೆಸ್ಟನ್ ಕ್ಷೇತ್ರ ಉಳಸಿಕೊಂಡಿರುವ ಸೀಮಾ, 2011ರಿಂದ ಸಂಸತ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪರಾಧ ಮತ್ತು ಸಮಾಜವಿರೋಧಿ ನಡವಳಿಕೆಯನ್ನು ನಿಭಾಯಿಸಲು ಪೊಲೀಸ್ ಮತ್ತು ಸಮುದಾಯ ಗುಂಪುಗಳೊಂದಿಗೆ ಕೆಲಸ ಮಾಡಿದ್ದಾರೆ.
ಕನಿಷ್ಕ ನಾರಾಯಣ್: ಲೇಬರ್ ಪಕ್ಷದ ಕನಿಷ್ಕ ನಾರಾಯಣ್, ಮಾಜಿ ವೆಲ್ಷ್ ಕಾರ್ಯದರ್ಶಿ ಅಲುನ್ ಕೈರ್ನ್ರನ್ನು ಸೋಲಿಸಿದ್ದಾರೆ. ನಾರಾಯಣ್ 12ನೇ ವಯಸ್ಸಿನಲ್ಲಿದ್ದಾಗ ಭಾರತದಿಂದ ಬ್ರಿಟನ್ನ ಕಾರ್ಡಿಫ್ಗೆ ಸ್ಥಳಾಂತರಗೊಂಡಿದ್ದರು. ಆಕ್ಸ್ಫರ್ಡ್ ಮತ್ತು ಸ್ಟಾ್ಯನ್ಫೋರ್ಡ್ನಲ್ಲಿ ಶಿಕ್ಷಣ ಗಳಿಸಿರುವ ನಾರಾಯಣ್, ಡೇವಿಡ್ ಕ್ಯಾಮರೂನ್ ಸರ್ಕಾರದ ಕ್ಯಾಬಿನೆಟ್ ಆಫೀಸ್ ಮತ್ತು ಲಿಜ್ ಟ್ರೂಸ್ ಸರ್ಕಾರದ ಪರಿಸರ ಇಲಾಖೆಗಳಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಉದ್ಯಮ ಸಂಸ್ಥೆಗಳಿಗೆ ಆರ್ಥಿಕ ಸಲಹೆಯನ್ನೂ ಅವರು ನೀಡುತ್ತ ಬಂದಿದ್ದಾರೆ.
ನಾಡಿಯಾ ವಿಟ್ಟೋಮ್: ಲೇಬರ್ ಪಕ್ಷದ ಭಾರತೀಯ ಮೂಲದ ನಾಡಿಯಾ ವಿಟ್ಟೋಮ್ ನಾಟಿಂಗ್ಹ್ಯಾಮ್ ಪೂರ್ವ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 2019ರಲ್ಲೂ ಅವರು ಇಲ್ಲಿಂದ ಗೆದ್ದಿದ್ದರು. 23ನೇ ವಯಸ್ಸಿನಲ್ಲೇ ಸಂಸತ್ ಸದಸ್ಯರಾಗಿದ್ದ ನಾಡಿಯಾ, ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
=