

ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾವ್ನಲ್ಲಿ ಕೋತಿಗಳ ಹಿಂಡು ಈವರೆಗೆ ಸುಮಾರು 250 ನಾಯಿಮರಿಗಳನ್ನು ಸಾಯಿಸಿ, ಮರಿಯ ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತಿವೆ. ಕಳೆದ ತಿಂಗಳಿಂದ ಮಂಗಗಳು ನಾಯಿಮರಿಗಳನ್ನು ಎತ್ತಿಕೊಂಡು ಹೋಗುತ್ತಿವೆ. ಅವುಗಳನ್ನು ಕಟ್ಟಡದ ಅಥವಾ ಮರಗಳ ಮೇಲಕ್ಕೆ ಎಳೆದುಕೊಂಡು ಹೋಗಿ ಕೆಳಗೆ ಬೀಳಿಸುತ್ತಿವೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಗಳನ್ನು ಹಿಡಿದಿದ್ದಾರೆ. ಗ್ರಾಮದ ನಿವಾಸಿ ಸೀತಾರಾಂ ನೈಬಲ್ ಎಂಬುವರ ನಾಯಿಮರಿಯನ್ನು 15 ದಿನಗಳ ಹಿಂದೆ ಮಂಗವೊಂದು ಎಳೆದುಕೊಂಡು ಹೋಗುತ್ತಿತ್ತು. ನಾಯಿಮರಿ ಕಿರುಚಲು ಆರಂಭಿಸಿದಾಗ ನೈಬಲ್ ಅದನ್ನು ಉಳಿಸಿದ್ದು, ಆ ಸಮಯದಲ್ಲಿ ತಮ್ಮ ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ, ಹಳ್ಳಿಯ ಕೆಲವು ನಾಯಿಗಳು ಒಂದು ಕೋತಿಮರಿಯನ್ನು ಸಾಯಿಸಿದ್ದವು. ಅದೇ ಕಾರಣದಿಂದ ಕೋತಿಗಳು ನಾಯಿಮರಿಗಳ ಪ್ರಾಣ ತೆಗೆಯುತ್ತಿವೆ. ಗ್ರಾಮದಲ್ಲಿ ಈಗ ನಾಯಿಗಳೇ ಇಲ್ಲದಂತಾಗಿದ್ದು, ಕೋತಿಗಳು ಮಕ್ಕಳ ಮೇಲೆರಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.