

ನವದೆಹಲಿ: ನಾಯಿ ಎಂದರೆ ನಿಯತ್ತಿಗೆ ಹೆಸರು. ಅದು ಯಾವತ್ತಿಗೂ ತನ್ನ ಮಾಲೀಕನಿಗೆ ಹಾನಿ ತಲುಪಿಸುವುದಿಲ್ಲ. ಆದರೆ ಅಮೆರಿಕದ ಕ್ಯಾನ್ಸಸ್ ರಾಜ್ಯದಲ್ಲಿ ಈ ರೀತಿಯ ವಿಚಿತ್ರ ಘಟನೆ ಆಕಸ್ಮಿಕವಾಗಿ ನಡೆದಿದ್ದು ಮಲೀಕ ಸಾವಿಗೀಡಾಗಿದ್ದಾನೆ.
ನಾಯಿಯೊಂದು ಗುಂಡು ಹಾರಿಸಿ ವ್ಯಕ್ತಿಯನ್ನು ಕೊಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ನಾಯಿಯ ಕಾಲಿಗೆ ಆಕಸ್ಮಿಕವಾಗಿ ಸೀಟಿನಲ್ಲಿ ಇಟ್ಟಿದ್ದ ಬಂದೂಕು ತಾಗಿದೆ. ಆಗ ಅಚಾನಕ್ಕಾಗಿ ಹಾರಿದ ಗುಂಡು ಎದುರು ಕುಳಿತಿದ್ದ ಮಾಲಿಕನ ಬೆನ್ನಿಗೆ ತಾಗಿದ್ದು ಆತ ಸಾವಿಗೀಡಾಗಿದ್ದಾನೆ.
ಮಾಲಿಕ ಹಾಗೂ ನಾಯಿ, ತಮ್ಮ ಕಾರಿನಲ್ಲಿ ಬೇಟೆಗೆಂದು ಹೊರಟಿದ್ದರು ಎನ್ನಲಾಗಿದೆ. ನಾಯಿಯನ್ನು ಮಾಲೀಕ, ಕಾರಿನ ಹಿಂಭಾಗದಲ್ಲಿ ಕೂರಿಸಿದ್ದು ಅಲ್ಲೇ ತನ್ನ ಬೇಟೆಯಾಡುವ ಬಂದೂಕನ್ನು ಇರಿಸಿದ್ದ. ದಾರಿಯಲ್ಲಿ ಹೋಗುವಾಗ ನಾಯಿ ಅಚಾನಕ್ಕಾಗಿ ರೈಫಲ್ನ ಕುದುರೆ ಮೇಲೆ ಕಾಲಿಟ್ಟಿದ್ದು ಇದರಿಂದಾಗಿ ಗುಂಡು ಹಾರಿದೆ. ಈ ಗುಂಡು, ಎದುರು ಕುಳಿತಿದ್ದ ಮಾಲೀಕನಿಗೆ ಬಡಿದಿದ್ದು ಅವರು ಗಂಭಿರವಾಗಿ ಗಾಯಗೊಂಡು ಸಾವಿಗೀಡಾದರು”ಎಂದು ಅಲ್ಲಿನ ಪೊಲೀಸ್ ಕಚೇರಿ ಮಾಹಿತಿ ನೀಡಿದೆ.
"ತನಿಖೆ ನಡೆಯುತ್ತಿದೆ, ಆದರೆ ಪ್ರಾಥಮಿಕ ತನಿಖೆ ಪ್ರಕಾರ, ಇದು ಬೇಟೆಗೆ ಸಂಬಂಧಿಸಿದ ಅಪಘಾತ ಎಂದು ತೋರುತ್ತಿದೆ" ಎಂದು ಕ್ಯಾನ್ಸಸ್ನ ಜಿಲ್ಲಾಧಿಕಾರಿ ಕಚೇರಿ ಪ್ರತ್ಯೇಕ ಹೇಳಿಕೆಯಲ್ಲಿ ಸೇರಿಸಿದೆ. ಜನರಿಗಿಂತ ಹೆಚ್ಚು ಬಂದೂಕುಗಳನ್ನು ಹೊಂದಿರುವ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಕಸ್ಮಿಕ ಗುಂಡಿನ ದುರಂತವಾಗಿ ಜನರು ಸಾಯುವುದು ಸರ್ವೇ ಸಾಮಾನ್ಯವಾಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ನ ಮಾಹಿತಿಯ ಪ್ರಕಾರ, 2021 ರಲ್ಲಿ ಬಂದೂಕು ಅಪಘಾತಗಳಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್)