ಗಾಂಧೀಜಿಯನ್ನು ಜೈಲಿಗಟ್ಟಿದ ದೇಶದ್ರೋಹ ಕಾನೂನು ದೇಶಕ್ಕೆ ಬೇಕಾ? ನ್ಯಾ. ನಾಗಮೋಹನ್ ದಾಸ್ ಪ್ರಶ್ನೆ

Nagamohan
Published on

ಬೆಂಗಳೂರು: ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ಬ್ರಿಟೀಷರು ಜಾರಿಗೊಳಿಸಿದ್ದ ದೇಶದ್ರೋಹ ಕಾನೂನನ್ನು ಕಾನೂನು ಪುಸ್ತಕದಿಂದ ತೆಗೆದುಹಾಕಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾ. ಎಚ್.ಎಸ್. ನಾಗಮೋಹನ್ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗಾಂಧಿ ಭವನದಲ್ಲಿ ಸೋಮವಾರ ರಾಷ್ಟ್ರೀಯ ಗಾಂಧಿ ವಸ್ತು ಸಂಗ್ರಹಾಲಯದ ಅಧ್ಯಕ್ಷ ಎ. ಅಣ್ಣಾ ಮಲೈ ರಚಿಸಿರುವ ‘ಗಾಂಧಿ- ದಿ ಲಾಯರ್’ ಎಂಬ ಪುಸ್ತಕ ಉದ್ಘಾಟಿಸಿ ಅವರು ಮಾತನಾಡಿದ ಅವರು, ದೇಶದ್ರೋಹದ ಜತೆಗೆ ಕ್ರಿಮಿನಲ್ (ನ್ಯಾಯಾಂಗ ನಿಂದನೆ) ಮತ್ತು ಕ್ರಿಮಿನಲ್ ಮಾನಹಾನಿ ಕಾನೂನು ಕೂಡ ತೆಗೆದು ಹಾಕಬೇಕೆಂದು ಒತ್ತಾಯಿಸಿದರು.

ದೇಶದ ಪರವಾಗಿ ಹೋರಾಡಿದ್ದ ಗಾಂಧೀಜಿ ಅವರನ್ನು ದೇಶದ್ರೋಹ ಕಾನೂನಿನಡಿಯಲ್ಲಿಯೇ ಬ್ರಿಟಿಷ್ ಸರ್ಕಾರವು ಜೈಲಿಗೆ ಹಾಕಿತ್ತು. ಅಂತಹ ಕಾನೂನನ್ನು ಸ್ವಾತಂತ್ರ್ಯದ ಬಳಿಕವೂ ಕಳೆದ 75 ವರ್ಷಗಳಿಂದಲೂ ಮುಂದುವರಿಸಿಕೊಂಡು ಬಂದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಈ ಕಾನೂನಿನ ವಿರುದ್ಧ ದನಿ ಎತ್ತಬೇಕು:

ದೇಶದ್ರೋಹ ಕಾನೂನನ್ನು ತೆಗೆದು ಹಾಕಬೇಕು ಎಂದು ಕಳೆದ 15-20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಇತ್ತೀಚೆಗೆ ಕಾನೂನು ಆಯುಕ್ತರು ದೇಶದ್ರೋಹ ಕಾನೂನು ಮುಂದುವರಿಯಬೇಕು ಮತ್ತು ಅದಕ್ಕೆ ವಿಧಿಸುವ ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು ಎಂದು ಶಿಾರಸು ಮಾಡುತ್ತಾರೆ. ಆದರೆ, ಸ್ವಾತಂತ್ರ್ಯದ ಬಳಿಕವೂ ದೇಶದ್ರೋಹ ಕಾನೂನಿನ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿದೆ. ಇದರ ಬಗ್ಗೆ ದೇಶದ ಜನ ಚರ್ಚೆ ಮಾಡಬೇಕು, ದನಿ ಎತ್ತಬೇಕು ಮತ್ತು ಪ್ರಶ್ನೆ ಮಾಡಬೇಕಿದೆ ಎಂದು ಹೇಳಿದರು.

ಪುಸ್ತಕದ ಬದಲಾವಣೆ ಪಾತ್ರ ದೊಡ್ಡದು:

ಜಗತ್ತಿನಲ್ಲಿ ಹಲವಾರು ಕ್ರಾಂತಿಗಳು ನಡೆದು ಸಾಕಷ್ಟು ಬದಲಾವಣೆಗಳು ಬಂದಿವೆ. ಯಾವುದೇ ಕ್ರಾಂತಿ ತರಲಾಗದಷ್ಟು ದೊಡ್ಡ ಬದಲಾವಣೆಯನ್ನು ಪುಸ್ತಕಗಳು ತಂದಿವೆ. ಪುಸ್ತಕ ಓದಿನಿಂದಾಗುವ ಬದಲಾವಣೆಯು ಬಹಳ ದೊಡ್ಡದು. ಆದ್ದರಿಂದ ಪುಸ್ತಕವನ್ನು ಖರೀದಿಸಿ ಓದುವ ಮತ್ತು ಪುಸ್ತಕಗಳನ್ನು ದಾನ ನೀಡುವ ಹವ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, 1857ರಲ್ಲಿ ಆರಂಭವಾದ ಸ್ವಾತಂತ್ರ್ಯ ಹೋರಾಟವು ಗನ್, ಮದ್ದು-ಗುಂಡು, ಫಿರಂಗಿಗಳಿಂದ ನಡೆಯುತ್ತಿತ್ತು. ಅಂತಹ ಹೋರಾಟವನ್ನು ಸಂಪೂರ್ಣವಾಗಿ ಬದಲಾಯಿಸಿ ಶಸ ರಹಿತ ಹೋರಾಟ ಮಾಡಿದ ಮತ್ತು ರಕ್ತರಹಿತ ಹೋರಾಟದ ಕ್ರಾಂತಿ ಮಾಡಿದ ಗಾಂಧೀಜಿ ಅವರು ಎಂದಿಗೂ ಪ್ರಸ್ತುತರಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಹಾಗೂ ಬೆಂ.ವಿವಿ ಕಾನೂನು ಕಾಲೇಜಿನ ಡೀನ್ ಪ್ರೊ. ಸುರೇಶ್ ವಿ. ನಾಡಗೌಡರ್ ಉಪಸ್ಥಿತರಿದ್ದರು.

ಹಸಿವಿನಿಂದ ಬಳಲುತ್ತಿರುವವರು, ನೆಲೆ ಇಲ್ಲದ ಜನರು ರಸ್ತೆ ಬದಿ, ರೈಲ್ವೆ ್ಲಾಟ್‌ಾರಂಗಳಲ್ಲಿ ಮಲಗುವ ದೃಶ್ಯಗಳನ್ನು ನೋಡುತ್ತಿದ್ದೇವೆ. ಈ ಪರಿಸ್ಥಿತಿ ಬದಲಾಗಬೇಕಾದರೆ, ಗಾಂಧೀಜಿ ಅವರ ಸರಳ ಜೀವನ, ಸಂಪತ್ತಿನ ಕ್ರೋಢೀಕರಣ ಮಾಡದಿರುವಂತಹ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ. - ಪ್ರೊ. ಸುರೇಶ್ ವಿ. ನಾಡಗೌಡರ್, ಬೆಂ.ವಿವಿ ಕಾನೂನು ಕಾಲೇಜಿನ ಡೀನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net