ಮತ್ತೆ ಒಂದಾಗ್ತಾರಾ ಕಿಚ್ಚ, ನಂದಕಿಶೋರ್?; ‘ರನ್ನ’, ‘ಮುಕುಂದ ಮುರಾರಿ’ ಬಳಿಕ ಮತ್ತೊಮ್ಮೆ ಹಿಟ್ ಕಾಂಬೋ…

Sudeep
Published on

ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈನಲ್ಲಿ ಬಿಡುಗಡೆಯಾಗಿ, ಪ್ಯಾನ್ ಇಂಡಿಯಾ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಆರ್.ಚಂದ್ರು ನಿರ್ದೇಶನದ ಉಪೇಂದ್ರ, ಕಿಚ್ಚ ಸುದೀಪ್ ಅಭಿನಯದ ‘ಕಬ್ಜಾ’ ಕೂಡ ಎಂಟು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಮೆಗಾ ಸಿನಿಮಾಗಳ ಬಳಿಕ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಉದ್ಭವಿಸಿದೆ. ಕೆಲವು ದಿನಗಳ ಹಿಂದೆ ‘ವಿಕ್ರಾಂತ್ ರೋಣ’ ನಿರ್ದೇಶಕ ಅನೂಪ್ ಭಂಡಾರಿ ಜತೆಗೆ ‘ಬಿಲ್ಲಾ ರಂಗಾ ಬಾಷಾ’ ಇದೇ ಡಿಸೆಂಬರ್ ಅಥವಾ 2023ರ ಜನವರಿಯಲ್ಲಿ ಸೆಟ್ಟೇರಲಿದೆ ಎನ್ನಲಾಗಿತ್ತು. ಅಥವಾ ಇದೇ ಕಾಂಬಿನೇಷನ್​ನಲ್ಲಿ ‘ಅಶ್ವತ್ಥಾಮ’ ಅನೌನ್ಸ್ ಆಗಲಿದೆ ಎಂಬ ಸುದ್ದಿಯೂ ಇತ್ತು. ಹಾಗೇ ‘ವಿಕ್ರಾಂತ್ ರೋಣ 2’ ಕುರಿತೂ ಮಾತುಕತೆಗಳು ನಡೆಯುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಈ ಚಿತ್ರಗಳ ನಡುವೆಯೇ ನಿರ್ದೇಶಕ ನಂದಕಿಶೋರ್, ಕಿಚ್ಚ ಸುದೀಪ್​ಗೆ ಆಕ್ಷನ್ ಕಟ್ ಹೇಳಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಹೌದು, ಕಳೆದ ವರ್ಷ ಧ್ರುವ ಸರ್ಜಾ ಜತೆ ‘ಪೊಗರು’ ಮತ್ತು ಕೆಲ ದಿನಗಳ ಹಿಂದಷ್ಟೆ ಬಿಡುಗಡೆಯಾದ ‘ರಾಣ’ ಚಿತ್ರಗಳ ಬಳಿಕ ನಂದಕಿಶೋರ್, ಹೊಚ್ಚ ಹೊಸ ಪ್ರಾಜೆಕ್ಟ್ ನೊಂದಿಗೆ ವಾಪಸ್ಸಾಗಿದ್ದಾರೆ. ಈಗಾಗಲೇ ಅವರು ಕಿಚ್ಚ ಸುದೀಪ್​ರನ್ನು ಭೇಟಿಯಾಗಿ ಕಥೆ ಹೇಳಿದ್ದು, ಅವರೂ ಓಕೆ ಎಂದಿದ್ದಾರಂತೆ. ಈ ಕುರಿತು ಖುದ್ದು ನಿರ್ದೇಶಕ ನಂದಕಿಶೋರ್​ರನ್ನು ಸಂರ್ಪಸಿದರೆ, ‘ಕೆಲಸದ ನಿಮಿತ್ತ ಮುಂಬೈನಲ್ಲಿದ್ದೇನೆ, ಈಗಲೇ ಏನೂ ಮಾಹಿತಿ ನೀಡಲಾಗುವುದಿಲ್ಲ’ ಎಂದು ಅಲ್ಲಗಳೆಯುತ್ತಾರೆ. ಆದರೆ, ‘ರನ್ನ’ ಮತ್ತು ‘ಮುಕುಂದ ಮುರಾರಿ’ ಚಿತ್ರಗಳ ಯಶಸ್ಸಿನ ಬಳಿಕ ಕಿಚ್ಚ ಸುದೀಪ್ ಮತ್ತು ನಂದಕಿಶೋರ್ ಹಿಟ್ ಕಾಂಬೋ, ಆರು ವರ್ಷಗಳ ಬಳಿಕ ಮೂರನೇ ಬಾರಿಗೆ ಒಂದಾಗೋದು ಪಕ್ಕಾ ಎನ್ನಲಾಗುತ್ತಿದೆ. ಇದೊಂದು ಪಕ್ಕಾ ಎಮೋಷನಲ್ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಕನ್ನಡದಲ್ಲಿ ನಿರ್ವಣವಾದರೂ, ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಅಧಿಕೃತ ಘೋಷಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net