

E20 Petrol: ಕೇಂದ್ರ ಸರ್ಕಾರದ E20 ಇಂಧನ ನೀತಿ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿತು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರು, 2021ರ ನೀತಿ ಆಯೋಗ ವರದಿಯನ್ನು ಉಲ್ಲೇಖಿಸಿ ವಾದಿಸಿದರು. ಅಷ್ಟಕ್ಕೂ ಈ ವರದಿಯಲ್ಲಿ ಇದ್ದ ವಿಷಯವೇನು? ಇದ್ಯಾಕೆ ಕೋರ್ಟ್ನಲ್ಲಿ ಪ್ರಸ್ತಾಪವಾಯಿತು? ಏನಿದು ನೀತಿ ಆಯೋಗ ವರದಿ? ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ.
ವಾಹನಗಳಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ (E20) ಬಳಕೆಯನ್ನು ಉತ್ತೇಜಿಸಲು ಭಾರತ ಸರ್ಕಾರ ಕ್ರಮಗಳನ್ನು ಚುರುಕುಗೊಳಿಸಿದೆ. ಆದಾಗ್ಯೂ, ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ಒಂದಷ್ಟು ತಜ್ಞರು, ಈ ರೀತಿಯ ಪೆಟ್ರೋಲ್, ಇಂಧನ ದಕ್ಷತೆಯ ಮೇಲೆ, ಅಂದರೆ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಆದಾಗ್ಯೂ, ಇತ್ತೀಚಿನ, 2021ರ NITI ಆಯೋಗದ ವರದಿಯು, E20 ಎಥೆನಾಲ್ ಮಿಶ್ರಣ ಪೆಟ್ರೋಲ್ ಮೈಲೇಜ್ಗೆ ಹೊಡೆತ ನೀಡುತ್ತದೆ ಎಂದು ಹೇಳಿದೆ.
E20 ಇಂಧನ ವಾಹನಗಳ ಮೈಲೇಜ್‌ನಲ್ಲಿ ಶೇ.2ರಿಂದ 6ರಷ್ಟು ಕಡಿತಕ್ಕೆ ಕಾರಣವಾಗುವುದರಿಂದ ಗ್ರಾಹಕರು ಎರಡು ಪಟ್ಟು ಹೊಡೆತವನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಇಂಧನ ಬೆಲೆಗಳನ್ನು ಪಾವತಿಸಿದರೂ ತಮ್ಮ ವಾಹನದ ಮೈಲೇಜ್ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಆದಾಗ್ಯೂ, ನೀತಿ ಆಯೋಗ ವರದಿಯು, ಮೈಲೇಜ್‌ನಲ್ಲಿನ ನಷ್ಟವನ್ನು ಸರಿದೂಗಿಸಲು ಮಿಶ್ರ ಇಂಧನಗಳ ಚಿಲ್ಲರೆ ಬೆಲೆಗಳನ್ನು ಕಡಿಮೆ ಮಾಡಬೇಕೆಂದು ಸೂಚಿಸಿದೆ.
ಭಾರತದಲ್ಲಿ ಎಥೆನಾಲ್ ಬೆರೆಸಿದ 2020-25ರ ಮಾರ್ಗಸೂಚಿಯ ಭಾಗವಾಗಿ NITI ಆಯೋಗ 2021ರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಇತ್ತೀಚಿನ ವರದಿಯು, ಹಲವಾರು ವಿಷಯಗಳನ್ನು ಉಲ್ಲೇಖಿಸಿದೆ. ದೇಶದಲ್ಲಿ E20 ಬಳಕೆ ಹೆಚ್ಚಾಗಬೇಕಾದರೆ, ಅಂತಹ ಇಂಧನಗಳ ಚಿಲ್ಲರೆ ಬೆಲೆ ಸಾಮಾನ್ಯ ಪೆಟ್ರೋಲ್‌ಗಿಂತ ಕಡಿಮೆಯಿರಬೇಕು ಎಂದು ಶಿಫಾರಸು ಮಾಡಿದೆ. ಎಥೆನಾಲ್‌ನ ಕ್ಯಾಲೋರಿಫಿಕ್ ಮೌಲ್ಯದಲ್ಲಿನ ಕಡಿತವನ್ನು ಸರಿದೂಗಿಸಲು, ಇದು ಮಿಶ್ರ ಇಂಧನಕ್ಕೆ ಬದಲಾಯಿಸುವುದನ್ನು ಬೆಂಬಲಿಸುತ್ತದೆ. ಸರ್ಕಾರವು ಎಥೆನಾಲ್ ಇಂಧನ ಮೇಲಿನ ತೆರಿಗೆ ವಿನಾಯಿತಿಗಳನ್ನು ಪರಿಗಣಿಸಬೇಕು ಎಂದು ವರದಿ ಸೂಚಿಸಿದೆ.
2016 ಮತ್ತು 2021ರ ನಡುವೆ ನಡೆಸಲಾದ ಎರಡು ಅಧ್ಯಯನಗಳನ್ನು ಉಲ್ಲೇಖಿಸಿ, E20 ಪರೀಕ್ಷೆಯಲ್ಲಿ ವಾಹನಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂದು ವರದಿ ಹೇಳಿದೆ. ಈ ಮಧ್ಯೆ ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಬಳಸುವ ಕೇಂದ್ರ ಸರ್ಕಾರ ನಿರ್ಧಾರದ ವಿರುದ್ಧ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸದ್ಯ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ,(ಏಜೆನ್ಸೀಸ್).