ಬದಲಾಗಲಿದೆಯೇ ಕರ್ನಾಟಕ ಸರ್ಕಾರದ ಲಾಂಛನ?: ದೇಶದ ಲಾಂಛನ ಕಾಯ್ದೆಗೆ ಅನುಗುಣವಾಗಿಲ್ಲ; ಮುಖ್ಯಮಂತ್ರಿ ಕಚೇರಿ ತಲುಪಿದ ವಿಚಾರ

Logo
Published on

| ರಮೇಶ ದೊಡ್ಡಪುರ ಬೆಂಗಳೂರು

ದೇಶದ ಬಹುತೇಕ ರಾಜ್ಯಗಳಂತೆಯೇ ಕರ್ನಾಟಕ ಸರ್ಕಾರವೂ ವಿಶಿಷ್ಠ ಹಾಗೂ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಲಾಂಛನ ಹೊಂದಿದ್ದು, ಇದೀಗ ಅದರ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕಾದ ಸಂದರ್ಭ ಬಂದಿದೆ. ಕರ್ನಾಟಕ ಸರ್ಕಾರದ ಲಾಂಛನವನ್ನು ಭಾರತದ ಲಾಂಛನದಲ್ಲಿರುವ ಅಶೋಕ ಸ್ಥಂಭದ ಭಾಗ ಮತ್ತು ಮೈಸೂರು ರಾಜ್ಯದ ಲಾಂಛನದ ಭಾಗವನ್ನು ಒಗ್ಗೂಡಿಸಿ ರೂಪಿಸಲಾಗಿದೆ. ಭಾರತ ಸರ್ಕಾರದ ಲಾಂಛನದ ಬಳಕೆ ಕುರಿತ ಕಾಯ್ದೆಯಂತೆ ಅಶೋಕ ಚಿಹ್ನೆಯ ನಂತರ ಸತ್ಯಮೇವ ಜಯತೆ ವಾಕ್ಯ ಇರಬೇಕಿದ್ದು, ಕರ್ನಾಟಕದ ಲಾಂಛನದಲ್ಲಿ ಅದು ಬೇರೆ ಕಡೆ ನೀಡಲಾಗಿದೆ. ಈ ಕುರಿತು ಸಲ್ಲಿಕೆಯಾದ ಮನವಿಯ ಆಧಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ. ಈಗಾಗಲೆ ಇಂತಹದ್ದೇ ಪ್ರಕರಣದಲ್ಲಿ ತೆಲಂಗಾಣ ಸರ್ಕಾರವು ಲಾಂಛನದಲ್ಲಿ ಬದಲಾವಣೆ ಮಾಡಿರುವುದರಿಂದ ಕರ್ನಾಟಕವೂ ಅದೇ ಮಾರ್ಗ ಅನುಸರಿಸಬೇಕಾಗುತ್ತದೆ ಎನ್ನಲಾಗಿದೆ.

ಲಾಂಛನ ಬಳಕೆಗೆ ಕಾಯ್ದೆ: ದೇಶದ ಆಡಳಿತಕ್ಕೊಂದು ಲಾಂಛನದ ಅವಶ್ಯಕತೆಯಿದೆ ಎಂಬ ಕಾರಣಕ್ಕೆ ಅಶೋಕ ಚಕ್ರವರ್ತಿ ಅಳವಡಿಸಿಕೊಂಡಿದ್ದ ನಾಲ್ಕು ತಲೆಗಳ ಸಿಂಹ, ಕೆಳಭಾಗದಲ್ಲಿ ಆನೆ, ಕುದುರೆ, ಸಿಂಹ ಹಾಗೂ ಎತ್ತಿನ ಆಕೃತಿಗಳ ನಡುವೆ ಧರ್ಮಚಕ್ರವಿರುವ ಗುರುತನ್ನು ಅಳವಡಿಸಿ ಕೊಂಡಿತ್ತು. ಇದರ ಕೆಳಗೆ ಅಂಟಿಕೊಂಡಂತೆ ‘ಸತ್ಯಮೇವ ಜಯತೆ’ ವಾಕ್ಯವನ್ನು ದೇವನಾಗರಿ ಲಿಪಿಯಲ್ಲಿ ಬರೆಯಬೇಕು ಎಂದು ತಿಳಿಸಿ ಅದಕ್ಕಾಗಿಯೇ ‘ಭಾರತದ ಲಾಂಛನ (ಅಸಮರ್ಪಕ ಬಳಕೆ ತಡೆ) ಕಾಯ್ದೆ-2005ನ್ನು ಜಾರಿಗೊಳಿಸಿದೆ. ಎಲ್ಲ ಕಡೆಗಳಲ್ಲಿ ಬಳಸಬೇಕಾದ ಚಿತ್ರಗಳನ್ನೂ ಕಾಯ್ದೆಯ ಪ್ರತಿಯಲ್ಲಿಯೇ ನೀಡಲಾಗಿದೆ.

ತೆಲಂಗಾಣದಲ್ಲಿ ಬದಲಾವಣೆ: ತೆಲಂಗಾಣ ರಾಜ್ಯ ರಚನೆಯಾದಾಗ ಅಲ್ಲಿನ ಸರ್ಕಾರವು ಕಾಕತೀಯ ಕಲಾ ತೋರಣ, ಅದರೊಳಗೆ ಚಾರ್​ವಿುನಾರ್, ಮೇಲ್ಭಾಗದಲ್ಲಿ ಅಶೋಕ ಸ್ಥಂಭದ ಲಾಂಛನ ಹಾಗೂ ಅತ್ಯಂತ ಕೆಳಭಾಗದಲ್ಲಿ ಸತ್ಯಮೇವ ಜಯತೆ ಎಂದು ನಮೂದಿಸಿತ್ತು. ಇದು ಭಾರತೀಯ ಲಾಂಛನ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತದೆ ಎಂದು ಮೂವರು ದೂರು ನೀಡಿದ್ದರು. ಕೂಡಲೆ ಈ ವಿಚಾರವನ್ನು ಪರಿಗಣಿಸಿ, ಅಶೋಕ ಸ್ಥಂಭಕ್ಕೆ ಅಂಟಿಕೊಂಡಂತೆ ಕೆಳಭಾಗದಲ್ಲೆ ಸತ್ಯಮೇವ ಜಯತೆ ಬರುವಂತೆ ಬದಲಾವಣೆ ಮಾಡಲಾಯಿತು. ಇದೇ ರೀತಿ ಕರ್ನಾಟಕದ ಲಾಂಛನದಲ್ಲೂ ಸೂಕ್ತ ಬದಲಾವಣೆ ತರುವ ಕುರಿತು ಪರಿಗಣಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಲಾಂಛನದ ವಿಶೇಷತೆ: ಮಧ್ಯದಲ್ಲಿ ಗಂಡಭೇರುಂಡ, ಅದರ ಮೇಲೆ ಅಶೋಕ ಸ್ಥಂಭದ ಲಾಂಛನ, ಎರಡೂ ಬದಿಯಲ್ಲಿ ಕೇಸರಕೂದಲಿನ ಹಳದಿಬಣ್ಣದ ಸಿಂಹ ದೇಹದ ಆನೆತಲೆಯ ಎರಡು ಶರಭಗಳಿವೆ. ಸಿಂಹ ಮತ್ತು ಆನೆಗಳಿಗಿಂತ ಬಲವಾದ ಶರಬವು ಸದಾಚಾರವನ್ನು ಎತ್ತಿಹಿಡಿಯುವುದು ಎಂದು ನಂಬಲಾಗಿದೆ. ಅವು ಹಸಿರು ಎಲೆಗಳ ವಿನ್ಯಾಸದ ಮೇಲೆ ನಿಂತಿವೆ. ಎಲೆಗಳ ವಿನ್ಯಾಸದ ಚಿತ್ರದ ಕೆಳಗೆ ಭಾರತದ ರಾಷ್ಟ್ರೀಯ ಧ್ಯೇಯವಾಕ್ಯವಾದ ‘ಸತ್ಯಮೇವ ಜಯತೆ’ ಇದೆ. ಇದರಲ್ಲಿ ಸಮಸ್ಯೆ ಎಂದರೆ, ಅಶೋಕ ಸ್ಥಂಭದ ಲಾಂಛನದ ಕೆಳಗೆ ಸತ್ಯಮೇವ ಜಯತೆ ಧ್ಯೇಯವಾಕ್ಯವಿರಬೇಕು. ಆದರೆ ಕರ್ನಾಟಕದ ಲಾಂಛನದಲ್ಲಿ ಇವೆರಡರ ನಡುವೆ ಬೇರೆ ವಿನ್ಯಾಸಗಳಿದ್ದು, ಸಾಕಷ್ಟು ಅಂತರವಿದೆ. ಇದು ರಾಷ್ಟ್ರೀಯ ಲಾಂಛನ ಕಾಯ್ದೆಯ ಉಲ್ಲಂಘನೆ ಆಗಿದೆ ಎಂದು ಬೆಂಗಳೂರಿನ ಹಲ್ಮಿಡಿ ಕೂಟ ಎಂಬ ಸಂಸ್ಥೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿವರವಾದ ಮಾಹಿತಿ ನೀಡಿದೆ.

ರಾಜ್ಯಭಾಷೆಗೂ ಮನ್ನಣೆ: ರಾಷ್ಟ್ರೀಯ ಲಾಂಛನ ಮಾರ್ಗಸೂಚಿಗೆ ಅನುಗುಣವಾಗಿ ಸತ್ಯಮೇವ ಜಯತೆ ವಾಕ್ಯವನ್ನು ಅಶೋಕ ಸ್ಥಂಭದ ಬಳಿ ಬರೆದಾಗ, ಈಗಿನ ವಾಕ್ಯ ಇರುವ ಸ್ಥಳ ಖಾಲಿ ಉಳಿಯುತ್ತದೆ. ಆ ಸ್ಥಳದಲ್ಲಿ ‘ಸಿರಿಗನ್ನಡಂ ಗೆಲ್ಗೆ’ ಎಂದು ಬರೆದರೆ ರಾಜ್ಯ ಭಾಷೆಗೂ ಗೌರವ ಸೂಚಿಸಿದಂತಾಗುತ್ತದೆ ಎಂದು ಹಲ್ಮಿಡಿ ಕೂಟ ನೀಡಿರುವ ಮನವಿಯನ್ನೂ ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಪ್ರಾಧಿಕಾರವು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net