ಆಜಾದ್ ಹೊಸ ಪಕ್ಷ ಸ್ಥಾಪನೆ?: ಜಮ್ಮು- ಕಾಶ್ಮೀರ ಚುನಾವಣೆಗೆ ತಯಾರಿ; ಎನ್​ಸಿ, ಪಿಡಿಪಿಗೆ ಸವಾಲು

Ghulam
ಗುಲಾಂ ನಬಿ ಆಜಾದ್, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ.
Published on

| ರಾಘವ ಶರ್ಮ ನಿಡ್ಲೆ ನವದೆಹಲಿ

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕ್ಷೇತ್ರ ಮರು ವಿಂಗಡಣೆ ಪೂರ್ಣಗೊಂಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಮಧ್ಯೆ, ಜಮ್ಮು-ಕಾಶ್ಮೀರದ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ, ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕಣಿವೆಯಲ್ಲಿ ಹೊಸ ಪಕ್ಷ ಸ್ಥಾಪನೆಯ ಸುಳಿವು ನೀಡಿದ್ದಾರೆ.

ಗುಲಾಂ ನಬಿ ಆಜಾದ್​ಗೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಜತೆಗಿನ ಮುನಿಸು ಹೊಸತೇನಲ್ಲ. ರಾಜ್ಯಸಭೆ ಸದಸ್ಯತ್ವದ ಅವಧಿ ಪೂರ್ಣಗೊಂಡ ಬಳಿಕವೂ ಪಕ್ಷ ನೀಡಿದ್ದ ಹುದ್ದೆಗಳನ್ನು ಸ್ವೀಕರಿಸಿದ್ದ ಆಜಾದ್, ಸೋನಿಯಾ, ರಾಹುಲ್, ಪ್ರಿಯಾಂಕಾ ವಿದೇಶದಲ್ಲಿರು ವಾಗ ರಾಜೀನಾಮೆ ಸಲ್ಲಿಸಿದ್ದಾರೆ. ಮೇಲಾಗಿ, ಸೆ.7ರ ಭಾರತ್ ಜೋಡೋ ಪಾದಯಾತ್ರೆ ಸನಿಹದಲ್ಲೇ ಈ ನಿರ್ಧಾರ ಪ್ರಕಟಿಸಿರುವುದರಿಂದ ಇದು ಪಕ್ಷಕ್ಕೆ ಮತ್ತಷ್ಟು ಹಾನಿ ಮಾಡಿದೆ. ತಮ್ಮನ್ನು ‘ಕಡೆಗಣಿಸಿರುವ’ ಪಕ್ಷದಲ್ಲಿದ್ದುಕೊಂಡು ಪ್ರಯೋಜನವಿಲ್ಲ ಎಂದು ಭಾವಿಸಿದ ಗುಲಾಂ ನಬಿ ಆಜಾದ್, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್, ಪಿಡಿಪಿ ಸೇರಿ ಇತರೆ ಪ್ರಾದೇಶಿಕ ಪಕ್ಷಗಳಿಗೆ ಹಾನಿ ಮಾಡುವ ಲೆಕ್ಕಾಚಾರ ಹಾಕಿಕೊಂಡಂತಿದೆ. ನ್ಯಾಷನಲ್ ಕಾನ್ಪರೆನ್ಸ್-ಪಿಡಿಪಿ ಮತ್ತಿತರ ಸಣ್ಣಪುಟ್ಟ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸುವ ಚರ್ಚೆ ನಡೆಸುತ್ತಿರುವ ಮಧ್ಯೆ ಆಜಾದ್ ಈ ಗುಂಪು ಸೇರುತ್ತಾರಾ ಅಥವಾ ಪರೋಕ್ಷವಾಗಿ ಬಿಜೆಪಿ ನೆರವಿಗೆ ಧಾವಿಸುತ್ತಾರಾ ಎಂಬ ಕುತೂಹಲ ಗರಿಗೆದರಿದೆ.

ಹೊಸ ಪಕ್ಷ, ಪರೋಕ್ಷ ನೆರವು: ಜಮ್ಮುವಿನಲ್ಲಿ ಬಿಜೆಪಿ ಬಗ್ಗೆ ಒಲವಿದ್ದರೂ ಕಾಶ್ಮೀರದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಕಣಿವೆಯಲ್ಲಿ ಗಟ್ಟಿ ನಾಯಕತ್ವವೂ ಪಕ್ಷವನ್ನು ಬಾಧಿಸಿದೆ. ಹಾಗಾಗಿ, ಜಮ್ಮುವಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿದ್ದರೂ, ಮುಸ್ಲಿಂ ಬಾಹುಳ್ಯ ಕಾಶ್ಮೀರದಲ್ಲಿ ಬಿಜೆಪಿಗೆ ಮತ ಬೆಂಬಲದ ಸಂಭವ ಕಡಿಮೆ. ಈ ಹಿನ್ನೆಲೆಯಲ್ಲಿ ಆಜಾದ್​ರ ಹೊಸ ಪಕ್ಷ ಬಿಜೆಪಿಗೆ ಪರೋಕ್ಷವಾಗಿ ನೆರವಿಗೆ ಬಂದರೂ ಆಶ್ಚರ್ಯವಿಲ್ಲ. ಅವರ ಪಕ್ಷ ಚುನಾವಣೆಯಲ್ಲಿ ಹೇಗೆ ಮತ್ತು ಯಾವ ಪಾತ್ರ ನಿರ್ವಹಿಸಲಿದೆ ಎನ್ನುವುದೂ ಇಲ್ಲಿ ಮುಖ್ಯ. ‘ಮೋದಿ ಜತೆಗಿನ ಒಡನಾಟದ ಕಾರಣದಿಂದ ಆಜಾದ್ ಬಿಜೆಪಿ ವಿರುದ್ಧ ಅಭಿಯಾನ ನಡೆಸುವ ಸಾಧ್ಯತೆ ಕಡಿಮೆ. ಆಜಾದ್ ಪ್ರತ್ಯೇಕವಾಗಿ ಸ್ಪರ್ಧಿಸಿ, ಬೇರೆ ಪಕ್ಷಗಳ ಮತಗಳನ್ನು ವಿಭಜಿಸುವ ಯತ್ನ ಮಾಡಬಹುದು. ಕಾಂಗ್ರೆಸ್​ಗಂತೂ ಹಾನಿ ಮಾಡುವುದು ನಿಶ್ಚಿತ. ಚುನಾವಣೋತ್ತರ ಸನ್ನಿವೇಶದಲ್ಲಿ ಏನೂ ಬೇಕಾದರೂ ಆಗಬಹುದು’ ಎಂದು ಬಿಜೆಪಿ ಸಂಸದರೊಬ್ಬರು ಅಭಿಪ್ರಾಯಪಡುತ್ತಾರೆ.

ಹೊಸ ಮತದಾರರು: ಜಮ್ಮು-ಕಾಶ್ಮೀರದಲ್ಲಿ ನೆಲೆಸಿರುವ ದೇಶದ ಇತರೆ ಭಾಗದ ಜನರಿಗೂ ಮತದಾನ ಹಕ್ಕು ನೀಡುವ ಹೊಸ ನಿಯಮವನ್ನು ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ 20-25 ಲಕ್ಷ ಮತದಾರರು ಹೆಚ್ಚಬಹುದು ಎಂದು ಇಲ್ಲಿನ ಚುನಾವಣಾಧಿಕಾರಿ ಕೆಲ ದಿನಗಳ ಹಿಂದಷ್ಟೇ ತಿಳಿಸಿದ್ದರು. ಕಾಶ್ಮೀರ ಹೊರತುಪಡಿಸಿ ಜಮ್ಮು ಮತ್ತು ಇತರೆ ರಾಜ್ಯಗಳ ಪಕ್ಷಗಳು, ಸಾರ್ವಜನಿಕ ವರ್ಗ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳಿಸಿದ್ದನ್ನು ಸ್ವಾಗತಿಸಿವೆ. ಹೀಗಾಗಿ, ಹೊಸ ಮತದಾರರು ರಾಜ್ಯದಲ್ಲಿ ಈಗಾಗಲೇ ಬೇರೂರಿರುವ ಸ್ಥಳೀಯ ಪಕ್ಷಕ್ಕೆ ಬೆಂಬಲಿಸುವ ಸಾಧ್ಯತೆ ಕಡಿಮೆ ಎಂಬ ವಾದಗಳೂ ಕೇಳಿಬಂದಿವೆ. ನ್ಯಾ. ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಕ್ಷೇತ್ರ ಮರು ವಿಂಗಡಣಾ ಆಯೋಗ ಮೇ 5ರಂದು ತನ್ನ ಅಂತಿಮ ವರದಿ ನೀಡಿತ್ತು. ಈ ಆಯೋಗವು ಜಮ್ಮುವಿಗೆ 6 ಹೆಚ್ಚುವರಿ ಮತ್ತು ಕಾಶ್ಮೀರಕ್ಕೆ 1 ಹೆಚ್ಚುವರಿ ಕ್ಷೇತ್ರಗಳನ್ನು ಸೇರಿಸಿದೆ. ಇದರಿಂದಾಗಿ ಕಣಿವೆಯಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಈಗ 90ಕ್ಕೇರಿದೆ.

ಮೋದಿ ಜತೆ ಆಪ್ತತೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಗುಲಾಂ ಆಜಾದ್ ಆಪ್ತತೆ ಗುಟ್ಟಿನ ವಿಷಯವೇನಲ್ಲ. ಈ ಬಗ್ಗೆ ಮೋದಿಯವರೇ ರಾಜ್ಯಸಭೆಯಲ್ಲಿ ತಿಳಿಸಿದ್ದರು. ಆಜಾದ್ ರಾಜ್ಯಸಭೆ ಅವಧಿ ಪೂರ್ಣಗೊಂಡಿದ್ದ ವೇಳೆ ಅವರ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಹಾಲಿ ಎನ್​ಡಿಎ ಸರ್ಕಾರ ಆಜಾದ್​ಗೆ ಪದ್ಮಭೂಷಣ ಪುರಸ್ಕಾರ ನೀಡಿಯೂ ಗೌರವಿಸಿದೆ. ಮೋದಿ ಸರ್ಕಾರ ಆಜಾದ್​ರನ್ನು ಉಪ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವ ಬಗ್ಗೆಯೂ ರಾಜಕೀಯ ವಲಯಗಳಲ್ಲಿ ಚರ್ಚೆಗಳು ಕೇಳಿಬಂದಿದ್ದವು. ಆದರೆ ಅದು ನಿಜವಾಗಲಿಲ್ಲ.

6 ನಾಯಕರು ರಾಜೀನಾಮೆ: ಆಜಾದ್ ಬೆಂಬಲಿಸಿ ಜಮ್ಮು ಕಾಶ್ಮೀರದ ಮತ್ತಷ್ಟು ಕಾಂಗ್ರೆಸ್​ನ ಕನಿಷ್ಠ 6 ನಾಯಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜಿ.ಎಂ. ಸರೂರಿ, ಹಾಜಿ ಅಬ್ದುಲ್ ರಶೀದ್, ಮಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ, ಚೌಧರಿ ಮಹಮ್ಮದ್ ಅಕ್ರಮ್ ಜತೆಗೆ ಮಾಜಿ ಸಚಿವ, ಹಿರಿಯ ನಾಯಕ ಆರ್.ಎಸ್. ಚಿಬೂ ಅವರು ಪಕ್ಷದಿಂದ ಹೊರನಡೆದಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಈ ಬೆಳವಣಿಗೆ ಕಾಂಗ್ರೆಸ್​ಗೆ ಸಮಸ್ಯೆ ದುಪ್ಪಟ್ಟಾಗಿಸಲಿದೆ.

ಆಜಾದ್ ಹಾದಿ

ಜಮ್ಮು-ಕಾಶ್ಮೀರದ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಹುಟ್ಟಿದ್ದು, 1949ರ ಮಾರ್ಚ್ 7. ಇವರ ತವರು ದೋಡಾ ಜಿಲ್ಲೆಯ ಸೋತಿ. ಇವರ ತಂದೆ ರಹಮತ್ತುಲ್ಲಾ ಭಟ್, ತಾಯಿ ಬಾಸಾ ಬೇಗಂ. ಸ್ಥಳೀಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಆಜಾದ್, ಕಾಲೇಜು ಶಿಕ್ಷಣಕ್ಕೆ ಜಮ್ಮುವಿಗೆ ಬಂದರು. ವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. ಕಾಶ್ಮೀರ ವಿವಿಯಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ವಿದ್ಯಾರ್ಥಿ ದಿಸೆಯಲ್ಲೇ ರಾಜಕೀಯಕ್ಕೆ ಕಾಲಿಟ್ಟ ಆಜಾದ್, ಐದು ದಶಕದ ಕಾಲ ಕಾಂಗ್ರೆಸ್ ಪಕ್ಷದಲ್ಲಿ ತಳ್ಳಮಟ್ಟದಿಂದ ಹಿಡಿದು, ರಾಜ್ಯ ಸಿಎಂ, ಕೇಂದ್ರ ಸಚಿವ ಸ್ಥಾನದವರೆಗೆ ವಿವಿಧ ಹುದ್ದೆಯನ್ನು ಅಲಂಕರಿಸಿದ್ದರು. ಜಮ್ಮು-ಕಾಶ್ಮೀರದ ಯುವ ಕಾಂಗ್ರೆಸ್ ಅಧ್ಯಕ್ಷ, ರಾಷ್ಟ್ರೀಯು ಯುವ ಕಾಂಗ್ರೆಸ್ ಅಧ್ಯಕ್ಷ, ಎಐಸಿಸಿಯಲ್ಲಿ ಸುಮಾರು 40 ವರ್ಷ ವಿವಿಧ ಸ್ಥಾನದಲ್ಲಿ ಇದ್ದರು. ಸಂಜಯ್ ಗಾಂಧಿ ಒಡನಾಡಿಯಾಗಿದ್ದ ಆಜಾದ್, ಬಹುಬೇಗ ಇಂದಿರಾ ಗಾಂಧಿ ಕುಟುಂಬದ ಆಪ್ತರಾದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ ಅನುಭವಿ. ಎರಡು ಸಾರಿ ಲೋಕಸಭೆಗೆ ಆಯ್ಕೆ ಆಗಿದ್ದ ಅವರು,ಸುಮಾರು ಎರಡು ದಶಕ ರಾಜ್ಯಸಭೆಯ ಸದಸ್ಯರಾಗಿದ್ದರು, 2021ರ ಫೆಬ್ರವರಿಯಲ್ಲಿ ನಿವೃತ್ತರಾಗುವವರೆಗೆ ಪ್ರತಿಪಕ್ಷ ನಾಯಕರೂ ಆಗಿದ್ದರು. 2005ರ ನವೆಂಬರಿಂದ 2008ರ ಜುಲೈವರೆಗೆ ಜಮ್ಮು-ಕಾಶ್ಮೀರದ ಸಿಎಂ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net