ಗೋಮೂತ್ರ ಕುಡಿಯುವುದರಿಂದ ಕ್ಯಾನ್ಸರ್​ ಗುಣವಾಗುತ್ತಾ? ತಜ್ಞರು ಹೇಳೋದೇನು? ಇಲ್ಲಿದೆ ಮಾಹಿತಿ... Cow Urine

Cow Urine
Published on

Cow Urine : ಇತ್ತೀಚೆಗೆ ಮದ್ರಾಸ್ ಐಐಟಿ ನಿರ್ದೇಶಕ ವಿ. ಕಾಮಕೋಟಿ ಅವರು ಗೋಮೂತ್ರ ಕುಡಿಯುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿತ್ತು.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚೆನ್ನೈನ ಮಾಂಬಲಂನಲ್ಲಿ ನಡೆದ ಗೋಪೂಜೆ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕಾಮಕೋಟಿ ಅವರು ಈ ಹೇಳಿಕೆಗಳನ್ನು ನೀಡಿದ್ದರು. ತಮ್ಮ ತಂದೆಗೆ ಜ್ವರ ಬಂದಾಗ, ಸನ್ಯಾಸಿಯೊಬ್ಬರ ಸಲಹೆಯ ಮೇರೆಗೆ ಅವರು ಗೋಮೂತ್ರ ಕುಡಿದರು. ಇದಾದ ಕೇವಲ 15 ನಿಮಿಷಗಳಲ್ಲೇ ಜ್ವರ ಕಡಿಮೆಯಾಯಿತು ಎಂದು ಕಾಮಕೋಟಿ ಹೇಳಿದ್ದರು.

ಗೋಮೂತ್ರವೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ. ಇದಿಷ್ಟೇ ಅಲ್ಲದೆ, ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಕಾಮಕೋಟಿ ಅವರು ಹೇಳಿದ್ದರು. ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವರು ಕಾಮಕೋಟಿ ಅವರ ಹೇಳಿಕೆಯನ್ನು ಬೆಂಬಲಿಸಿದರೆ, ಇನ್ನು ಕೆಲವರು ಅವರ ಹೇಳಿಕೆಗಳನ್ನು ಟೀಕಿಸಿದರು.

ಐಐಟಿ ಮದ್ರಾಸ್ ನಿರ್ದೇಶಕರು 'ಹುಸಿ ವಿಜ್ಞಾನ'ವನ್ನು ಹರಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಕೂಡ ಟೀಕಿಸಿದ್ದರು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಟಿಕೆಎಸ್ ಎಳಂಗೋವನ್ ಮಾತನಾಡಿ, ಕೇಂದ್ರ ಸರ್ಕಾರವು ದೇಶದಲ್ಲಿ ಶಿಕ್ಷಣವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದರ ನಡುವೆ ತಮಿಳುನಾಡಿನ ವೈದ್ಯರ ಸಂಘದ ಸದಸ್ಯರಾದ ಡಾ. ಜಿ ಆರ್ ರವೀಂದ್ರನಾಥ್, ಗೋಮೂತ್ರ ಕುಡಿಯುವುದರಿಂದ ಬ್ಯಾಕ್ಟೀರಿಯಾ ಸೋಂಕುಗಳು ಉಂಟಾಗಬಹುದು ಎಂದು ಎಚ್ಚರಿಸಿದರು. ಆದರೆ, ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಮದ್ರಾಸ್ ಐಐಟಿ ನಿರ್ದೇಶಕರಿಗೆ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಮತ್ತು ಯಾರನ್ನೂ ಗೋಮೂತ್ರ ಕುಡಿಯುವಂತೆ ಹೇಳಿಲ್ಲ ಎನ್ನುವ ಮೂಲಕ ಕಾಮಕೋಟಿಯವರಿಗೆ ಬೆಂಬಲ ಸೂಚಿಸಿದರು.

ತೀವ್ರ ಟೀಕೆಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲು ಮುಂದೆ ಬಂದ ಕಾಮಕೋಟಿ, ಗೋಮೂತ್ರವು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿರುವ ಅಮೆರಿಕದಲ್ಲಿ ನಡೆಸಲಾದ ಐದು ಸಂಶೋಧನಾ ಪ್ರಬಂಧಗಳನ್ನು ಹಂಚಿಕೊಳ್ಳಬಹುದು ಎಂದು ವಾದಿಸಿದರು.

ಔಷಧೀಯ ಉದ್ದೇಶಗಳಿಗಾಗಿ ಗೋಮೂತ್ರದ ಬಳಕೆಯನ್ನು ಆಯುರ್ವೇದವು ಬಹಳ ಹಿಂದಿನಿಂದಲೂ ಉಲ್ಲೇಖಿಸಿದೆ. ಆದರೆ, ಆಧುನಿಕ ವಿಜ್ಞಾನದಲ್ಲಿ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಗೋಮೂತ್ರವು ಕ್ಯಾನ್ಸರ್, ಮಧುಮೇಹ ಮತ್ತು ಕ್ಷಯರೋಗ ಸೇರಿದಂತೆ ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಅನೇಕ ಜನರು ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ, ವೈದ್ಯರು ಅಂತಹ ಹೇಳಿಕೆಗಳನ್ನು ಪ್ರಚಾರ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಗೋಮೂತ್ರ ಅಥವಾ ಯಾವುದೇ ಇತರ ಪ್ರಾಣಿಗಳ ಮೂತ್ರವು ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಅಥವಾ ತಡೆಯುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮೇಯೊ ಕ್ಲಿನಿಕ್‌ನ ಡಾ. ಡೊನಾಲ್ಡ್ ಹೆನ್ಸ್‌ರುಡ್ ಹೇಳಿದ್ದಾರೆ.

COVID-19 ಸಾಂಕ್ರಾಮಿಕ ಸಮಯದಲ್ಲಿ, ಗುಜರಾತ್‌ನ ಕೆಲವರು ಗೋ ಸಂರಕ್ಷಣಾ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ದೇಹದ ಮೇಲೆ ಗೋಮಲ ಮತ್ತು ಮೂತ್ರವನ್ನು ಹಚ್ಚಿಕೊಳ್ಳುತ್ತಿದ್ದರು. ಈ ರೀತಿ ಮಾಡಿದರೆ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಿದ್ದರು. ಆದರೆ, ವೈದ್ಯರು ಈ ಪದ್ಧತಿಯ ವಿರುದ್ಧ ಧ್ವನಿ ಎತ್ತಿದ್ದರು. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಆಗಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ. ಜೆಎ ಜಯಲಾಲ್, ಗೋಮಲ ಅಥವಾ ಮೂತ್ರವು ಕೋವಿಡ್‌ನಿಂದ ರಕ್ಷಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಮತ್ತು ಅದು ಸಂಪೂರ್ಣವಾಗಿ ನಂಬಿಕೆಯನ್ನು ಆಧರಿಸಿದೆ ಎಂದು ಹೇಳಿದ್ದರು. ಆ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಅಪಾಯಗಳಿವೆ. ಪ್ರಾಣಿಗಳಿಂದ ಮನುಷ್ಯರಿಗೆ ರೋಗಗಳು ಹರಡಬಹುದು ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ಕೆಲವು ಸಂಶೋಧಕರು ಗೋಮೂತ್ರವು ಪ್ರಯೋಜನಕಾರಿ ಎಂದು ಹೇಳಿಕೊಳ್ಳುತ್ತಾರೆ.

ಆಯುರ್ವೇದವು ಮಲ್ಟಿಫಾರ್ಮುಲೇಷನ್‌ಗಳನ್ನು ತಯಾರಿಸಲು ಗೋಮೂತ್ರವನ್ನು ಬಳಸಲಾಗುತ್ತದೆ ಎಂದು ಡಾ. ಗುರುಪ್ರೀತ್ ಕೌರ್ ರಾಂಧವ ಸ್ಪಷ್ಟಪಡಿಸಿದರು. ಯಾವ ರೀತಿಯ ಗೋಮೂತ್ರವನ್ನು ಬಳಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಇಲ್ಲಿ ಮುಖ್ಯವಾಗಿದೆ. ಹೈಬ್ರಿಡ್ ತಳಿಗಳ ಗೋಮೂತ್ರವನ್ನು ಬಳಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೋಮೂತ್ರವು ತ್ಯಾಜ್ಯ ಉತ್ಪನ್ನವಾಗಿದ್ದು ಅದನ್ನು ಸೇವಿಸಬಾರದು ಎಂದು ಮೂತ್ರಪಿಂಡಶಾಸ್ತ್ರಜ್ಞರು ನಂಬುತ್ತಾರೆ. ಇದರಲ್ಲಿ ಸಾರಜನಕ, ರಂಜಕ, ಪೊಟ್ಯಾಸಿಯಮ್ ಅಂಶಗಳಿವೆ. ಇದು ಕೃಷಿ ಬಳಕೆಗೆ ಮಾತ್ರವೇ ಹೊರತು ಮಾನವ ಬಳಕೆಗೆ ಅಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ವಿಷಯದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net