

ನವದೆಹಲಿ: ಕರೊನಾ ಮೂರನೇ ಅಲೆ ಇನ್ನು ಕೆಲವೇ ದಿನಗಳಲ್ಲಿ ಭಾರತಕ್ಕೆ ಪ್ರವೇಶಿಸಲಿದೆ, ಇದು ಮಕ್ಕಳನ್ನು ಹೆಚ್ಚು ಬಾಧಿಸಲಿದೆ, ಎರಡನೇ ಅಲೆಗಿಂತಲೂ ಹೆಚ್ಚು ತೀವ್ರತೆ ಹೊಂದಿರಲಿದೆ ಎಂಬೆಲ್ಲ ವಿಷಯಗಳು ಈಗಾಗಲೇ ಹರಿದಾಡುತ್ತಿದ್ದು, ಜನರು ಚಿಂತೆಗೀಡಾಗುವಂತೆ ಮಾಡಿದೆ. ಈ ಮಧ್ಯೆ ಕರೊನಾ ಮೂರನೇ ಅಲೆಯ ಸಂಭಾವ್ಯ ಪರಿಣಾಮಗಳ ಕುರಿತು ಅಧ್ಯಯನ ನಡೆದಿದ್ದು, ಆ ಕುರಿತು ಮಾಹಿತಿಯೊಂದು ಹೊರಬಿದ್ದಿದೆ.
'ಪ್ಲಾಸಿಬಿಲಿಟಿ ಆಫ್ ಎ ಥರ್ಡ್ ವೇವ್ ಆಫ್ ಕೋವಿಡ್-19 ಇನ್ ಇಂಡಿಯಾ: ಎ ಮ್ಯಾಥ್ಮೆಟಿಕಲ್ ಮಾಡೆಲಿಂಗ್ ಬೇಸ್ಡ್ ಅನಾಲಿಸಿಸ್' ಎಂಬ ಶೀರ್ಷಿಕೆ ಮೇರೆಗೆ ಈ ಅಧ್ಯಯನ ನಡೆದಿದೆ. ಇದು ಭಾರತದಲ್ಲಿನ ಕರೊನಾ ಮೂರನೇ ಅಲೆಯ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದೆ.
ಈ ಅಧ್ಯಯನದ ಪ್ರಕಾರ ಕರೊನಾ ಮೂರನೇ ಅಲೆ ಎರಡನೇ ಅಲೆಗಿಂತ ತೀವ್ರವಾಗಿ ಬಾಧಿಸುವ ಸಾಧ್ಯತೆ ಕಡಿಮೆ. ಈಗಾಗಲೇ ಬಹಳಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಎರಡನೇ ಅಲೆ ಉತ್ತುಂಗದಲ್ಲಿ ಇರುವಾಗಲೇ ದೇಶದ ಶೇ. 40 ಜನರು ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಅಲ್ಲದೆ ಲಸಿಕೆ ಸೋಂಕಿನ ಪ್ರಮಾಣವನ್ನು ಶೇ. 60 ತಗ್ಗಿಸಲಿದೆ. ಹೀಗಾಗಿ ಮೂರನೇ ಅಲೆ ಅಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಈ ಅಧ್ಯಯನ ತಿಳಿಸಿದೆ. ಉಳಿದಂತೆ ಹಲವು ವಿಷಯಗಳನ್ನಾಧರಿಸಿ ಈ ಅಧ್ಯಯನ ನಡೆದಿದ್ದು, ಅದರ ಫಲಿತಾಂಶಗಳು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟವಾಗಿವೆ. (ಏಜೆನ್ಸೀಸ್)