

ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಸೇರುವ ಜನಜಂಗುಳಿಯಿಂದ ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚುವ ಜತೆಗೆ ಈಗ ಮತ್ತೊಂದು ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈಗ ದೀಪಾವಳಿ ಸಂಭ್ರಮಕ್ಕೂ ಹಿನ್ನಡೆ ಆಗುವ ಸಾಧ್ಯತೆ ಗೋಚರಿಸಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಇಂಥದ್ದೊಂದು ಮಾಹಿತಿ ಹೊರಬಿದ್ದಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕರೊನಾ ಸೋಂಕು ಹೆಚ್ಚಾಗುತ್ತದೆ ಎಂದು ತಜ್ಞರು ಶಂಕಿಸಿದ್ದಾರೆ. ಹಾಗಾಗಿಯೇ ಅದಕ್ಕೆಂದೇ ಒಂದು ತಜ್ಞರ ಸಮಿತಿ ರಚಿಸಿದ್ದು, ಈ ಸಲ ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಬೇಕೇ ಬೇಡವೇ ಎಂಬ ಬಗ್ಗೆ ಸಮಿತಿ ನೀಡುವ ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು. ಇಂದು ಸಂಜೆ ಅಥವಾ ನಾಳೆಯೊಳಗೆ ತಜ್ಞರ ಸಮಿತಿ ವರದಿ ನೀಡಲಿದ್ದು, ಆ ಬಳಿಕ ಪಟಾಕಿ ಮಾರಾಟ ಕುರಿತ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮೈಸೂರು ದಸರಾ ಸರಳವಾಗಿ ಆಚರಿಸಲಾಗಿದೆ. ಅದೇ ಮಾದರಿಯಲ್ಲಿ ಸಂಪ್ರದಾಯಗಳಿಗೆ ತೊಂದರೆಯಾಗದಂತೆ ಸರಳ ರೀತಿಯಲ್ಲಿ ಹಬ್ಬಗಳ ಆಚರಣೆಗೆ ಅವಕಾಶ ಕೊಡಬೇಕು ಎಂಬುದು ಸರ್ಕಾರದ ಉದ್ದೇಶ ಎಂದಿರುವ ಅವರು, ದಸರಾ ಹಾಗೂ ಉಪ ಚುನಾವಣೆ ನಡೆದ ರಾಜರಾಜೇಶ್ವರಿನಗರ ಮತ್ತು ಶಿರಾದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.