

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ತಿಂಗಳುಗಳಿಂದ ಬಾಕಿ ಇರುವ ದಂಡವನ್ನು ವಸೂಲಿ ಮಾಡುವ ನಿಟ್ಟಿನಲ್ಲಿ ಘೋಷಿಸಿದ 50% ಆಫರ್ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು. ಮಾತ್ರವಲ್ಲ, ಅದು ವರ್ಕೌಟ್ ಆಗಿ ನಿರೀಕ್ಷೆಗೂ ಮೀರಿ ದಂಡ ಸಂಗ್ರಹವಾಗಿದ್ದಲ್ಲದೆ, ಫೆ. 11ರ ವರೆಗಿದ್ದ ಅವಧಿಯನ್ನು ವಿಸ್ತರಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿತ್ತು.
ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್ ಸಂದರ್ಭ ಅವರು ಇಂಥದ್ದೊಂದು ಶೇ. 50 ವಿನಾಯಿತಿ ವಿಚಾರವನ್ನು ಪ್ರಸ್ತಾಪಿಸಿ ಸಲಹೆ ನೀಡಿದ್ದರಿಂದ ಈ ಆಫರ್ ಜಾರಿಗೆ ಬಂದಿತ್ತು. ಫೆ. 3ರಿಂದ ಫೆ. 11ರ ವರೆಗೆ ಈ ವಿನಾಯಿತಿ ಜಾರಿಯಲ್ಲಿದ್ದು ಒಟ್ಟು 121 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿತ್ತು.
ಈಗ ಈ 50% ವಿನಾಯಿತಿ ಸಂಬಂಧ ನ್ಯಾ.ವೀರಪ್ಪ ಅವರು ಪ್ರತಿಕ್ರಿಯಿಸಿದ್ದು, ಅದನ್ನು ಮತ್ತೆ ಜಾರಿಗೊಳಿಸುವ ಮನವಿ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ವಿನಾಯಿತಿ ಮೇರೆ ದಂಡ ಸಂಗ್ರಹಕ್ಕೆ ಸಂಚಾರ ವಿಭಾಗದ ವಿಶೇಷ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ. ಇನ್ನೆರಡು ವಾರಗಳ ಕಾಲ ವಿನಾಯಿತಿ ಅವಕಾಶ ನೀಡುವಂತೆ ಕೋರಿದ್ದಾರೆ. ಫೆ. 14ರಿಂದ ಫೆ.28ರವರೆಗೆ ಮುಂದುವರಿಸುವ ಚಿಂತನೆ ಇದೆ ಎಂದಿರುವ ನ್ಯಾ.ವೀರಪ್ಪ, ಈ ಬಗ್ಗೆ ನಾಳೆ ನಿರ್ಧಾರ ಹೊರಬೀಳಲಿದೆ ಎಂದಿದ್ದಾರೆ. ಯಾವುದಕ್ಕೂ ನಾಳೆ ಹೊರಹೊಮ್ಮುವ ಅಧಿಕೃತ ಆದೇಶದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.