

ಕನಕಪುರ : ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕರೊನಾ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಸೋಮವಾರ ಬಿಡುಗಡೆಯಾದ 9 ಮಂದಿಗೆ ಹೂಗುಚ್ಛ ನೀಡಿ ಬೀಳ್ಕೊಡಲಾಯಿತು.
ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಕೆ.ರವಿ ಮಾತನಾಡಿ, ಕರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲಾಡಳಿತ ನಾಲ್ಕು ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳು ಉತ್ತಮ ನಿರ್ವಹಣೆ ಮಾಡುವ ಮೂಲಕ ಕೇಂದ್ರಕ್ಕೆ ಬರುವ ಸೋಂಕಿತರಿಗೆ ಕೇರ್‌ಸೆಂಟರ್‌ಗೆ ಬರುವ ಸೋಂಕಿತರಿಗೆ ಪೌಷ್ಟಿಕ ಆಹಾರ, ಔಷಧ, ಮೂಲಸೌಲಭ್ಯದ ಜತೆಗೆ ವೈದ್ಯಕೀಯ ಸಿಬ್ಬಂದಿ ಕರ್ತವ್ಯನಿಷ್ಠೆಯಿಂದಾಗಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಸೋಂಕಿತರು ಶೀಘ್ರ ಗುಣಮುಖರಾಗಿ ಮನೆಗೆ ವಾಪಸಾಗುತ್ತಿದ್ದಾರೆ ಎಂದರು.
ಹಳ್ಳಿಗಳು ಕರೊನಾ ಹಾಟ್‌ಸ್ಪಾಟ್ ಆಗಿವೆ ಎನ್ನುತ್ತಿದ್ದವರಿಗೆ ಕೋವಿಡ್ ಕೇರ್ ಸೆಂಟರ್‌ಗಳು ಉತ್ತಮ ಕೆಲಸ ಮಾಡುವ ಮೂಲಕ ತಕ್ಕ ಉತ್ತರ ನೀಡುತ್ತಿವೆ. ಕೇಂದ್ರಗಳ ಉತ್ತಮ ನಿರ್ವಹಣೆಯಿಂದಾಗಿ ಗ್ರಾಮೀಣ ಜನರು ಆರೋಗ್ಯವಾಗಿದ್ದಾರೆ. ಜತೆಗೆ ಈ ಭಾಗದ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಕರೊನಾ ನಿಯಂತ್ರಣಕ್ಕೆ ಕೈಜೋಡಿಸಿರುವುದೂ ಕೂಡ ಕಾರಣವಾಗಿದೆ ಎಂದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ, ದೊಡ್ಡಾಲಹಳ್ಳಿ ಗ್ರಾ.ಪಂ. ಅಧ್ಯಕ್ಷ ನಂದೀಶ್, ಮರಳೇಬೇಕುಪ್ಪೆ ಗ್ರಾ.ಪಂ. ಅಧ್ಯಕ್ಷ ನಾರಾಯಣ, ಕರವಸೂಲಿಗಾರ ಸಂತೋಷ, ಆರೋಗ್ಯ ಹಿರಿಯ ನಿರೀಕ್ಷ ಗುರುಸಿದ್ದಯ್ಯ, ನರ್ಸ್ ಗಿರಿಜಾ ಇತರರಿದ್ದರು.
ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ
ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯ ಕೇಂದ್ರಕ್ಕೆ ಭೇಟಿ ಔಷಧ, ಊಟೋಪಚಾರಗಳನ್ನು ನೀಡುತ್ತಿದ್ದರು. ವಾಕಿಂಗ್ ಮಾಡಲು, ವಿಶ್ರಾಂತಿ ಪಡೆಯಲು ಕಟ್ಟಡ ಮೇಲೆ ಅನುಕೂಲ ಮಾಡಿಕೊಟ್ಟಿದ್ದರು. ಪ್ರತಿನಿತ್ಯ ಸಸ್ಯಾಹಾರ ಮತ್ತು ಮಾಂಸಾಹಾರದ ಊಟಗಳನ್ನು ನೀಡುವ ಮೂಲಕ ಚೆನ್ನಾಗಿ ನೋಡಿಕೊಂಡಿದ್ದರಿಂದ ಕೋವಿಡ್ ಕೇಂದ್ರದಲ್ಲಿ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ ಎಂದು ಸೋಂಕಿನಿಂದ ಗುಣಮುಖರಾದವರು ಅಭಿಪ್ರಾಯ ಹಂಚಿಕೊಂಡರು.