ಆಸ್ಪತ್ರೆಗೆ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಓಪನ್​ ಹಾರ್ಟ್​ ಸರ್ಜರಿ ಮಾಡಿದ ವೈದ್ಯರು!

Hospital F
Published on

ನವದೆಹಲಿ: ಯಾವುದಾದರೂ ಒಂದು ಕಟ್ಟಡಕ್ಕೆ ಬೆಂಕಿ ಬಿದ್ದರೆ ಅದರಲ್ಲಿರುವ ಬಹುತೇಕ ಎಲ್ಲರೂ ಮೊದಲು ಮಾಡುವ ಕೆಲಸ ಆ ಕಟ್ಟಡದಿಂದ ಹೊರಗೆ ಓಡಿಬರುವುದು. ಆದರೆ ಇಲ್ಲೊಂದು ಕಡೆ ಆಸ್ಪತ್ರೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ವೈದ್ಯರ ತಂಡವೊಂದು ತೆರೆದ ಹೃದಯದ ಚಿಕಿತ್ಸೆ ಮಾಡಿ ಮುಗಿಸಿದೆ.

ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿದ್ದ ನೂರಕ್ಕೂ ಅಧಿಕ ಮಂದಿಯನ್ನು ತೆರವುಗೊಳಿಸಲಾಗಿತ್ತು. ಆದರೆ ಆ ಆಸ್ಪತ್ರೆಯ ಎಂಟು ವೈದ್ಯರ ತಂಡವೊಂದು ಅದ್ಯಾವುದನ್ನೂ ಲೆಕ್ಕಿಸದೆ ಓಪನ್ ಹಾರ್ಟ್ ಸರ್ಜರಿಯನ್ನು ನಡೆಸಿದೆ.

ಅಂದಹಾಗೆ ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು ರಷ್ಯಾದ ಬ್ಲಾಗೊವೆಸ್ಚೆನ್ಸ್ಕ್​ ಎಂಬಲ್ಲಿನ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ. ಈ ಆಸ್ಪತ್ರೆಯ ತಾರಸಿ ಹಾಗೂ ಮೇಲಿನ ಮಹಡಿಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ತಳಮಹಡಿಯ ಆಪರೇಷನ್ ಥಿಯೇಟರ್​ನಲ್ಲಿ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಸ್ಪತ್ರೆಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ವೈದ್ಯತಂಡದ ಈ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net