

ವೈದ್ಯರ ಬಗ್ಗೆ, ಅವರ ಅಸಾಧಾರಣ ಕಾರ್ಯದ ಬಗ್ಗೆ ಸಮಾಜದಲ್ಲಿ ಗೌರವವಿದೆ. ವೃತ್ತಿಬದ್ಧತೆಯ ವೇಳೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿ ಕರೊನಾ ಕಾಲದಲ್ಲಿ ಸಾಲು-ಸಾಲು ಸವಾಲುಗಳನ್ನು ಎದುರಿಸಿದ್ದಾರೆ. ಸಮಸ್ಯೆಗಳನ್ನು ಬದಿಗೊತ್ತಿ ರೋಗಿಗಳ ರಕ್ಷಣೆಗೆ ಶ್ರಮಿಸಿದ್ದಾರೆ. ಅವರ ಈ ಸಮರ್ಪಣೆ, ನಿಷ್ಠೆ ಜನರಲ್ಲಿ ವಿಶ್ವಾಸ ಮೂಡಿಸಿದೆ. ಅದರ ಪರಿಣಾಮ ಲಕ್ಷಾಂತರ ಜನರು ಕರೊನಾವನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಸೋಂಕಿತರಿಗಿಂತ ಗುಣಮುಖರಾಗಿ ಬಿಡುಗಡೆ ಆಗುತ್ತಿರುವವರ ಸಂಖ್ಯೆ ಹೆಚ್ಚುವಲ್ಲಿ ವೈದ್ಯಲೋಕದ ಶ್ರಮ ಅಪಾರ. ಈ ನಡುವೆ ಕೆಲ ಅಹಿತಕರ ಘಟನೆ ನಡೆದು, ವೈದ್ಯರ ಮೇಲೆ ಹಲ್ಲೆ ನಡೆಸಿದ, ವಾಗ್ದಾಳಿ ಮಾಡಿದ ಪ್ರಕರಣಗಳು ಜೀವರಕ್ಷಕರ ಮನಸ್ಸನ್ನು ನೋಯಿಸಿವೆ. ಆದರೂ, ಧೃತಿಗೆಡದೆ ಅವರ ಕರ್ತವ್ಯ ಮಾಡುತ್ತಿದ್ದಾರೆ. ಕರೊನಾದ ಮೊದಲ ಅಲೆಗಿಂತ, ಎರಡನೇ ಅಲೆಯಲ್ಲಿ ವೈದ್ಯರು ತುಂಬ ಒತ್ತಡ ಅನುಭವಿಸಿದ್ದಾರೆ. ಆಸ್ಪತ್ರೆಯಲ್ಲಿನ ಪರಿಸ್ಥಿತಿಗಳು, ಸಾವು-ನೋವುಗಳು ಅವರನ್ನೂ ಅಲುಗಾಡಿಸಿವೆ. ದೇಶಾದ್ಯಂತ 15 ತಿಂಗಳುಗಳಲ್ಲಿ 1,300ಕ್ಕೂ ಅಧಿಕ ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ ಕರ್ನಾಟಕದ ವೈದ್ಯರ ಸಂಖ್ಯೆ 69. ರಾಜ್ಯದಲ್ಲಿ ಎಷ್ಟೋ ವೈದ್ಯರು ಹಲವು ಪಾಳಿಗಳಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ಕೋವಿಡ್ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಕುಟುಂಬ ಸದಸ್ಯರೊಡನೆ ಬೆರೆಯುವಂತಿಲ್ಲ.
ರೋಗಿಯ ಪ್ರಾಣ ಉಳಿಸುವ ಏಕೈಕ ಗುರಿಯೊಂದಿಗೆ ಸಮಯದ ಚೌಕಟ್ಟು ಇಲ್ಲದೆ, ಕುಟುಂಬದವರಿಂದ ದೂರ ಉಳಿದು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅವರ ಮೇಲೆ ನಡೆಯುವ ಹಲ್ಲೆ ಪ್ರಕರಣಗಳು ಸಮಾಜಕ್ಕೆ ತಪ್ಪುಸಂದೇಶ ರವಾನಿಸುವುದಲ್ಲದೆ, ವೈದ್ಯರ ಮನೋಬಲವನ್ನು ಕುಗ್ಗಿಸುತ್ತವೆ. ರೋಗಿಯ ಸಾವು ಸಂಭವಿಸಿದಾಗ ನೈಜ ಪರಿಸ್ಥಿತಿ ಅರಿಯುವ ಬದಲು ಭಾವಾವೇಶದಲ್ಲಿ ವೈದ್ಯರ ಮೇಲೆ, ಇತರ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಖಂಡನೀಯ. ಜನರೂ ಈಗಿನ ಕ್ಲಿಷ್ಟ ಸನ್ನಿವೇಶ ಅರ್ಥ ಮಾಡಿಕೊಂಡು ವೈದ್ಯರೊಂದಿಗೆ ನಿಲ್ಲಬೇಕು. ತೀವ್ರ ಒತ್ತಡದ ಸ್ಥಿತಿಯನ್ನು ಸೃಷ್ಟಿಸಬಾರದು. ಯಾವುದೋ ತಪ್ಪುಗಳಿಗೆ ವೈದ್ಯರನ್ನು ದೂಷಿಸಬಾರದು. ‘ವೈದ್ಯರಿಗೆ ಪ್ರೋತ್ಸಾಹಧನ ನೀಡಲಾಗುವುದು’ ಎಂಬ ಭರವಸೆಯನ್ನು ಸರ್ಕಾರ ಈವರೆಗೆ ಈಡೇರಿಸಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿ. ಲಕ್ಷಾಂತರ ಸೋಂಕುಪೀಡಿತರನ್ನು ಗುಣಮುಖ ಮಾಡಿರುವ ವೈದ್ಯರ ಕಾರ್ಯದ ಬಗ್ಗೆ ಮೆಚ್ಚುಗೆ, ಕೃತಜ್ಞತೆಯ ಭಾವ ಇರಲಿ.