ರೋಗಿ ಸಾವು: ಹಿಂಸೆಯ ಕೇಂದ್ರವಾದ ಆಸ್ಪತ್ರೆ- ರಕ್ಷಣೆಗಾಗಿ ವೈದ್ಯರ ಭಾರಿ ಪ್ರತಿಭಟನೆ

protest
Published on

ಹೈದರಾಬಾದ್: ಕರೊನಾ ವಾರಿಯರ್ಸ್​ ಎಂದು ವೈದ್ಯರನ್ನು ಎಷ್ಟೇ ಹಾಡಿ ಹೊಗಳುತ್ತಿದ್ದರೂ, ಈ ವೈರಸ್​ನಿಂದಾಗಿ ವೈದ್ಯರು ಅಕ್ಷರಶಃ ನಲುಗಿ ಹೋಗಿದ್ದಾರೆ. ಒಂದೆಡೆ, ಸೋಂಕಿತರಿಂದ ಕರೊನಾ ಮಹಾಮಾರಿ ತಮ್ಮ ದೇಹವನ್ನು ಹೊಕ್ಕಿಬಿಟ್ಟರೆ ಎಂಬ ಆತಂಕವಾದರೆ, ಇನ್ನೊಂದೆಡೆ, ಸೋಂಕಿತರು ಮೃತಪಟ್ಟರೆ ಅವರ ಕುಟುಂಬಸ್ಥರಿಂದ ನಡೆಯುವ ದಾಳಿ!

ಇಂಥದ್ದೇ ಒಂದು ಹಲ್ಲೆ ಪ್ರಕರಣ ತೆಲಂಗಾಣ ರಾಜ್ಯದ ಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ. ಕರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬದವರು ವೈದ್ಯರ ಮೇಲೆ ದಾಳಿ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ಕುರ್ಚಿ ಹಾಗೂ ಇತರ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಶುಶ್ರೂಷಕರ ಮೇಲೂ ದಾಳಿ ನಡೆಸಿದ್ದಾರೆ.

ಇದರಿಂದ ಬೆದರಿರುವ ವೈದ್ಯರು ತಮಗೆ ರಕ್ಷಣೆ ನೀಡುವಂತೆ ಕೋರಿ ಪ್ರತಿಭಟನೆ ನಡೆಸಲು ಶುರು ಮಾಡಿದ್ದಾರೆ. 300ಕ್ಕೂ ಅಧಿಕ ವೈದ್ಯರು ಇದೀಗ ಪ್ರತಿಭಟನೆನಿರತರಾಗಿದ್ದಾರೆ. ಆರೋಗ್ಯ ಸಚಿವರು ಕೂಡಲೇ ಪ್ರತಿಕ್ರಿಯೆ ನೀಡಬೇಕು ಹಾಗೂ ಭದ್ರತೆಯ ಭರವಸೆ ನೀಡದ ಹೊರತು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ವೈದ್ಯರು ಆಗ್ರಹಿಸುತ್ತಿದ್ದಾರೆ.

ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯು ಶ್ವಾಸಕೋಶ ವೈಫಲ್ಯದಿಂದ ಬಳಲುತ್ತಿದ್ದರು. ಅವರು ಬದುಕುವುದೇ ಕಷ್ಟವಾಗಿತ್ತು ಎಂದು ವೈದ್ಯರು ಮೊದಲೇ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದರು. ಆ ವ್ಯಕ್ತಿ ಚಿಕಿತ್ಸೆಗೆ ಸಹಕರಿಸುವ ಬದಲು ಸಿಪಿಎಪಿ ಮಾಸ್ಕ್ ತೆಗೆದು ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆದರೆ ಘಟನೆಗೆ ವೈದ್ಯರೇ ಕಾರಣವೆಂದಿರುವ ಕುಟುಂಬಸ್ಥರು ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಗಾಂಧಿ ಆಸ್ಪತ್ರೆಯ ವೈದ್ಯರ ಮೇಲೆ ಇದು ಎರಡನೇ ಬಾರಿ ದಾಳಿ ನಡೆಯುತ್ತಿದೆ. ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಕರ್ತವ್ಯ ಮುಂದುವರೆಸಿದ್ದೆವು. ಆದರೆ ಈಗ ಮೌನವಾಗಿ ಇರಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net