10 ಗಂಟೆಗಳ ಹಾರ್ಟ್​ ಸರ್ಜರಿ ಬಳಿಕ ವೈದ್ಯರ ಬಳಿ ಮನಮೋಹನ್ ಸಿಂಗ್ ಕೇಳಿದ್ದು ಇದೊಂದೇ ವಿಷಯ... | Manmohan Singh

ವಿಜಯವಾಣಿ - 2024-12-27T124631.376
Published on

Manmohan Singh: ಮಾಜಿ ಪ್ರಧಾನಿ, ಆರ್ಥಿಕ ಸುಧಾರಣೆಯ ಹರಿಕಾರ ಡಾ. ಮನಮೋಹನ್ ಸಿಂಗ್ ವಿಧಿವಶರಾದ ಸುದ್ದಿಗೆ ಇಡೀ ದೇಶವೇ ಕಂಬನಿ ಮಿಡಿದಿದ್ದು, ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ದೇಶ ಕಂಡ ನೆಚ್ಚಿನ ನಾಯಕರ ಬಗ್ಗೆ ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಕೆಲವರು ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

2009

2009ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಸಮಯದಲ್ಲಿ ಆಸ್ಪತ್ರೆಯ ಕೊಠಡಿಯಲ್ಲಿ ವೈದ್ಯರೊಂದಿಗೆ ಹೆಚ್ಚು ಸಮಯ ಕಳೆದ ಡಾ. ಸಿಂಗ್, 10 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ವೈದ್ಯರ ಬಳಿ ಕೇಳಿದ ಆ ಒಂದೇ ಒಂದು ವಿಷಯದ ಬಗ್ಗೆ ಸರ್ಜರಿ ಮಾಡಿದ ಡಾಕ್ಟರ್​ ರಮಕಾಂತ್​ ಪಾಂಡಾ ಅವರು ಇಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಅಸಲಿಗೆ ಅವರು ಕೇಳಿದ್ದು ತಮ್ಮ ಆರೋಗ್ಯದ ಬಗ್ಗೆಯೂ ಅಲ್ಲ, ಕುಟುಂಬಸ್ಥರ ಬಗ್ಗೆಯೂ ಅಲ್ಲ ಎಂಬುದೇ ಅಚ್ಚರಿ.

ಒಂದು ನಿಮಿಷ ಆಶ್ಚರ್ಯಕ್ಕೆ ದೂಡಿತು

"ಅದು 2009. ಆಗ ಡಾ. ಸಿಂಗ್​ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಇತ್ತು. ನಾನು ಅವರಿಗೆ ಸರ್ಜರಿ ಮಾಡುವ ವೈದ್ಯನಾಗಿದ್ದೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಏಮ್ಸ್​) ದಾಖಲಾಗಿದ್ದ ಅವರಿಗೆ 10ರಿಂದ 11 ಗಂಟೆಗಳ ಕಾಲ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದೆವು. ಸರ್ಜರಿ ಯಶಸ್ವಿ ಆದ ಬಳಿಕ ಅವರನ್ನು ವಾರ್ಡ್​ಗೆ ಶಿಫ್ಟ್​ ಮಾಡಲಾಯಿತು. ರಾತ್ರಿ ಅವರಿಗೆ ಅಳವಡಿಸಿದ್ದ ಮೊದಲ ಉಸಿರಾಟದ ಪೈಪ್ ಅನ್ನು ಹೊರತೆಗೆದಾಗ ಅವರು ಮಾತನಾಡಲು ಪ್ರಾರಂಭಿಸಿದರು. ಡಾ. ಸಿಂಗ್, ನನ್ನನ್ನು ಮೊದಲು ಕೇಳಿದ್ದೇ 'ನನ್ನ ದೇಶ ಹೇಗಿದೆ? ಕಾಶ್ಮೀರ ಹೇಗಿದೆ' ಎಂದು. ಇದು ಒಂದು ನಿಮಿಷ ನನ್ನನ್ನು ಬಹಳ ಆಶ್ಚರ್ಯಕ್ಕೆ ದೂಡಿತು" ಎಂದು ವೈದ್ಯರು ಹೇಳಿದ್ದಾರೆ.

ಬಲವಾದ ಮನುಷ್ಯ

"ಈ ಮಾತುಗಳನ್ನು ಕೇಳಿದ ನಾನು, ಕೂಡಲೇ ಏಕೆ ನೀವು ನಿಮ್ಮ ಸರ್ಜರಿ ಹೇಗಾಯಿತು? ಎಂಬುದರ ಬಗ್ಗೆ ಏನ್ನನ್ನು ಕೇಳಲಿಲ್ಲ ಎಂದು ಪ್ರಶ್ನಿಸಿದಾಗ ಅವರು, 'ನನಗೆ ಶಸ್ತ್ರಚಿಕಿತ್ಸೆಯ ಬಗ್ಗೆ ಚಿಂತೆ ಇಲ್ಲ. ನನ್ನ ದೇಶದ ಬಗ್ಗೆ ನನಗೆ ಹೆಚ್ಚು ಚಿಂತೆ ಇದೆ' ಎಂದರು. ನನ್ನ ಪ್ರಕಾರ, ಅವರೊಬ್ಬರು ಮಹಾನ್ ವ್ಯಕ್ತಿ, ವಿನಮ್ರ ವ್ಯಕ್ತಿತ್ವ ಮತ್ತು ದೇಶಭಕ್ತಿ ಹೊಂದಿದ್ದವರು. ಸಾಮಾನ್ಯವಾಗಿ ಇಂತಹ ಶಸ್ತ್ರಚಿಕಿತ್ಸೆಗಳ ಬಳಿಕ ರೋಗಿಗಳು ಎದೆನೋವಿನ ಬಗ್ಗೆ ದೂರು ನೀಡುತ್ತಾರೆ. ಆದರೆ, ಅವರು ಮಾತ್ರ ಒಮ್ಮೆಯೂ ಇದರ ಬಗ್ಗೆ ಧ್ವನಿ ಎತ್ತಲಿಲ್ಲ. ಇದೇ ಹೇಳುತ್ತೆ, ಡಾ. ಸಿಂಗ್ ಒಬ್ಬ ಬಲವಾದ ಮನುಷ್ಯ ಎಂದು" ರಮಕಾಂತ್​ ಅವರೊಂದಿಗಿದ್ದ ನೆನಪನ್ನು ಇಲ್ಲಿ ಮೆಲುಕು ಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net