ಹೊರಗೆ ಚೀಟಿ ಬರೆದುಕೊಟ್ಟ ವೈದ್ಯರಿಗೆ ತರಾಟೆ

mlr mla visit
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಾಸಕ ಕೆ.ವೈ.ನಂಜೇಗೌಡ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ರೂಪ, ಡಾ.ಶ್ರೀನಿವಾಸ್, ಡಾ.ವಸಂತ್ ಕುಮಾರ್ ಇದ್ದರು.
Published on

ಕೋಲಾರ: ಮಾಲೂರು ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಶಾಸಕ ಕೆ.ವೈ.ನಂಜೇಗೌಡ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಲೋಪಗಳನ್ನು ಕಂಡು ಸರಿಪಡಿಸಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಸ್ವಚ್ಛತೆ, ವಾಹನಗಳ ಪಾರ್ಕಿಂಗ್, ವೈದ್ಯರ ಸೇವೆ, ಆರೋಗ್ಯ ಸೇವೆ, ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಚರ್ಚಿಸಿ, ಸೇವೆ ಲಭ್ಯತೆ ಕುರಿತು ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ರೋಗಿಗಳಿಗೆ ವೈದ್ಯರೊಬ್ಬರು ಔಷಧಗಳನ್ನು ಹೊರಗಡೆ ತರಲು ಬರೆದುಕೊಟ್ಟಿದ್ದರು. ಈ ಬಗ್ಗೆ ರೋಗಿಯೊಬ್ಬರು ಶಾಸಕರ ಗಮನಕ್ಕೆ ತಂದರು. ಆಗ ಕೂಡಲೇ ವೈದ್ಯರನ್ನು ಕರೆಸಿ ಏನಿದು ಎಂದು ಪ್ರಶ್ನಿಸಿದರು. ನಮ್ಮಲ್ಲಿ ಲಭ್ಯವಿಲ್ಲದ ಕಾರಣ ಬರೆದುಕೊಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ಇದು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್ ಅವರಿಗೆ ಸೂಚಿಸಿದರು.

ಆಸ್ಪತ್ರೆ ಆವರಣದಲ್ಲಿನ ಜನ ಔಷಧ ಕೇಂದ್ರದಲ್ಲಿ ರಿಯಾಯಿತಿಯಲ್ಲಿ ಔಷಧ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿತು. ನೇರ ಮಳಿಗೆಗೆ ಭೇಟಿ ನೀಡಿದ ಕೆ.ವೈ.ನಂಜೇಗೌಡ, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಔಷಧ ಕೊಡಬೇಕು ಎಂಬ ಉದ್ದೇಶದಿಂದ ಸರ್ಕಾರ ಜನ ಔಷಧ ಮಳಿಗೆ ಸ್ಥಾಪನೆ ಮಾಡಿದೆ. ಸರ್ಕಾರದ ಜತೆಗೆ ಕೈ ಜೋಡಿಸಬೇಕು ಎಂದು ಮಳಿಗೆ ಮಾಲೀಕನಿಗೆ ತಾಕೀತು ಮಾಡಿದರು.

ಆಸ್ಪತ್ರೆ ಮತ್ತು ಬಸ್ ನಿಲ್ದಾಣ ಸಮೀಪದಲ್ಲೇ ಇರುವುದರಿಂದ ಸಾರ್ವಜನಿಕರು ಶೌಚಗೃಹಕ್ಕಾಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಜತೆಗೆ ಬೆಂಗಳೂರು ಸೇರಿ ಬೇರೆಗೆ ಕಡೆ ಕೆಲಸಗಳಿಗಾಗಿ ಹೋಗುವವರು ವಾಹನಗಳನ್ನು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿ ಹೋಗುತ್ತಾರೆ. ಇದರಿಂದ ಆಂಬುಲೆನ್ಸ್ ಬಂದು ಹೋಗಲು ದಾರಿಯಿಲ್ಲ ಎಂದು ಜನ ದೂರಿದರು. ಇದಕ್ಕೆ ಅಂಬುಲೆನ್ಸ್ ಬಂದು ಹೋಗಲು ಅವಕಾಶ ಹಾಗೂ ರೋಗಿಗಳಿಗೆ ತೊಂದರೆಯಾಗದAತೆ ಎಚ್ಚರವಹಿಸಬೇಕು, ಸಮಾಜ ಸೇವಕ ಕಿಚ್ಚಿ ಅವರು ಇತೀಚೆಗೆ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್‌ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ರೂಪಾ, ಡಿಎಚ್‌ಒ ಡಾ.ಶ್ರೀನಿವಾಸ್, ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಹಾಜರಿದ್ದರು.

ಹೆಚ್ಚುವರಿ ಡಯಾಲಿಸಿಸ್‌ ಯಂತ್ರ ಅಳವಡಿಕೆ ಭರವಸೆ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡ, ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಮೀಸಲಿರಿಸಿದೆ ಎಂದು ಹೇಳಿದರು.

ಮಾಲೂರು ಆಸ್ಪತ್ರೆಗೆ ಡಯಾಲಿಸೀಸ್ ರೋಗಿಗಳು ಆಗಮಿಸುವುದು ದಿನೇದಿನೆ ಹೆಚ್ಚಾಗುತ್ತಿದೆ. ಹೆಚ್ಚುವರಿ ಯಂತ್ರಗಳು ಬೇಕಾಗಿದೆ ಎಂಬುದು ಅಧಿಕಾರಿಗಳು ಬೇಡಿಕೆಯಿಟ್ಟದ್ದಾರೆ. ಯಾವ ರೀತಿ ಹೆಚ್ಚು ಮಾಡಬಹುದು ಎಂಬುದರ ಬಗ್ಗೆ ಡಿಎಚ್‌ಒ ಸಲಹೆ ನೀಡಿದ್ದು, ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಹೊಸ ಬಸ್ ನಿಲ್ದಾಣಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ನಾಲ್ಕೆದು ದಿನದಲ್ಲಿ ಟೆಂಡರ್ ಕರೆಯಲಾಗುವುದು. ಹೊಸ ಬಸ್ ನಿಲ್ದಾಣ, ಹೊಸ ಆಸ್ಪತ್ರೆ ಎರಡು ಒಟ್ಟಿಗೆ ಕೆಲಸ ಆಗಲಿದೆ. ಸಾರ್ವಜನಿಕರು ಅಲ್ಲಿಯ ತನಕ ಸಹಕಾರ ನೀಡಬೇಕು ಎಂದು ಕೋರಿದರು.

ಬೆಳಕು ಚೆಲ್ಲಿದ್ದ ವಿಜಯವಾಣಿ

ಬಾಕ್ಸ್...

ಸರ್ಕಾರಿ ಆಸ್ಪತ್ರೆಯ ಆರೋಗ್ಯ-9 ಸರಣಿ ವರದಿಯಡಿ ಸಮಸ್ಯೆ ಸರಮಾಲೆಯಲ್ಲಿ ಮಾಲೂರು ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವಿಜಯವಾಣಿ ಬೆಳಕು ಚೆಲ್ಲಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಶನಿವಾರ ಭೇಟಿ ನೀಡಿದ್ದು, ರೋಗಿಗಳಿಗೆ ಸಮಪರ್ಕವಾಗಿ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net