ಹಾಲಿ, ಮಾಜಿ ಶಾಸಕರ ಭೇಟಿ ಕೌತುಕ!

klr mla
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿಯಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರನ್ನು ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿಯಾಗಿರುವುದು.
Published on

ಕಿರುವಾರ ಎಸ್. ಸುದರ್ಶನ್ ಕೋಲಾರ

ಬಂಗಾರಪೇಟೆ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರನ್ನು ಶುಕ್ರವಾರ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಹಳ್ಳಿಯಲ್ಲಿನ ನಿವಾಸಕ್ಕೆ ಭೇಟಿ ನೀಡಿದ ಎಸ್.ಎನ್.ನಾರಾಯಣಸ್ವಾಮಿ ಎಂ.ನಾರಾಯಣಸ್ವಾಮಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಜತೆಗೆ ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ ಮತ್ತಿತರರು ಇದ್ದರು ಎನ್ನಲಾಗಿದೆ.

ಈ ಹಿಂದೆ ಎಂ.ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲೇ ಇದ್ದರು. ನಂತರದ ಬೆಳವಣಿಗೆಗಳಿಂದ ೨೦೧೩ರಲ್ಲಿ ಬಿಜೆಪಿ ಸೇರ್ಪಡೆಯಾದರು. ಚುನಾವಣೆಗಳಲ್ಲಿ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಪರಸ್ಪರ ಆರೋಪ, ಪ್ರತ್ಯಾರೋಪದ ಮೂಲಕ ರಾಜಕೀಯವಾಗಿ ಎದುರಾಳಿಯಾಗಿದ್ದರು.

ಚುನಾವಣೆಯಲ್ಲಿ ಸೋತರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ನಾರಾಯಣಸ್ವಾಮಿ, ಆರೋಗ್ಯ ಸಮಸ್ಯೆಯಿದ್ದ ಕಾರಣದಿಂದ ಕೆಲ ದಿನಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆದರೆ, ಈಗ ಹಾಲಿ ಶಾಸಕರೇ ಕಾಂಗ್ರೆಸ್‌ಗೆ ಆಹ್ವಾನಿಸಿರುವುದು ಕೌತುಕಕ್ಕೆ ಕಾರಣವಾಗಿದೆ. ಅಂತೆಯೇ, ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು, ಇದಕ್ಕೆ 10-15 ದಿನ ಕಾಲಾವಕಾಶ ಬೇಕಾಗಿದೆ ಎಂದು ಎಂ.ನಾರಾಯಣಸ್ವಾಮಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

* ಕ್ಷೇತ್ರದಲ್ಲಿ ಮೈತ್ರಿ ಬಲಿಷ್ಠ

ಬಂಗಾರಪೇಟೆ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೂ ಬಲಿಷ್ಠವಾಗಿದ್ದು, ಮುಂದಿನ ಚುನಾವಣೆ ಎದುರಿಸುವುದು ಎಸ್.ಎನ್.ನಾರಾಯಣಸ್ವಾಮಿಗೆ ಸುಲಭವಿಲ್ಲ. ಆದ್ದರಿಂದ ಈ ಮಾರ್ಗವನ್ನು ಸುಲಭವಾಗಿಸಿಕೊಳ್ಳಲು ಜೆಡಿಎಸ್, ಬಿಜೆಪಿಯ ಮುಖಂಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಎಂ.ನಾರಾಯಣಸ್ವಾಮಿ ರಾಜಕೀಯವಾಗಿ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದು, ಅವರ ಮೇಲೆ ಒಕ್ಕಲಿಗ, ಭೋವಿ ಸಮುದಾಯ ಸೇರಿ ಇತರ ಸಮುದಾಯಗಳ ಒಲವು ಹೆಚ್ಚಾಗಿದೆ. ಬಿಜೆಪಿಯಲ್ಲಿ ಮುಂದುವರಿದರೆ ಬಲಿಷ್ಠ ಪೈಪೋಟಿ ನೀಡುತ್ತಾರೆ ಎಂದು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ನಡೆದಿದೆ.

* ಅಧಿಕೃತ ಸೇರ್ಪಡೆ ಬಾಕಿ

ಕಳೆದ ವಿಧಾನ ಪರಿಷತ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದ ಕೆ.ಚಂದ್ರಾರೆಡ್ಡಿ ಅವರು ಸಹ ಮರಳಿ ಕಾಂಗ್ರೆಸ್‌ಗೆ ಬರಲು ತೀರ್ಮಾನಿಸಿದ್ದು, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ರಾಜ್ಯ ಮುಖಂಡರು ದಿನಾಂಕ ನಿಗದಿ ಮಾಡಿದರೆ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಇದೇ ವೇದಿಕೆಯಲ್ಲಿ ಎಂ.ನಾರಾಯಣಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದು, ಬಂದರೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.

* ಒಕ್ಕೂಟದ ಚುನಾವಣೆಗೆ ಸಿದ್ಧತೆ

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪುರಸಭೆ ಚುನಾವಣೆಗಳು ಎದುರಾಗಲಿವೆ. ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದ್ದ ಡಿಸಿಸಿ ಬ್ಯಾಂಕ್, ಕೋಮುಲ್ ಚುನಾವಣೆಗಳ ದಿನಾಂಕ ಘೋಷಣೆಯಾಗಿದ್ದು, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಡೇರಿ ಪ್ರವೇಶ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಬಂಗಾರಪೇಟೆ ತಾಲೂಕಿನ ನತ್ತಿಬೆಲೆ ಪ್ರಾಥಮಿಕ ಹಾಲು ಸಹಕಾರ ಸಂಘದಿಂದ ಈಗಾಗಲೇ ಡೆಲಿಗೇಟ್ ಪಡೆದುಕೊಂಡಿದ್ದು, ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಗೆ ಸಜ್ಜಾಗುತ್ತಿದ್ದು, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ತಾಲೂಕಿನಲ್ಲಿ ಒಕ್ಕೂಟದ ಮಾಜಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಸಂಘಗಳಲ್ಲಿ ಹಿಡಿತ ಹೊಂದಿದ್ದಾರೆ. ಈಗ ಬಂಗಾರಪೇಟೆ ತಾಲೂಕಿನಿಂದ ಇಬ್ಬರು ನಿರ್ದೇಶಕರು ಆಯ್ಕೆಯಾಗಬೇಕಿದೆ. ಚುನಾವಣೆಯ ಹಾದಿ ಸುಗಮವಾಗಿಸಿಕೊಳ್ಳಲು ಮುಂದಾಗಿರುವ ಎಸ್.ಎನ್.ನಾರಾಯಣಸ್ವಾಮಿ ಹಿರಿಯರ ಬೆಂಬಲ ಕೋರುತ್ತಿದ್ದು, ಶತಾಯಗತಾಯ ನಿರ್ದೇಶಕರಾಗಿರಲು ಸಿದ್ಧತೆ ಕೈಗೊಂಡಿದ್ದಾರೆ.

* ಆಪರೇಷನ್‌ಗೆ ಒಳಗಾಗಿದ್ದ ಎಂ.ನಾರಾಯಣಸ್ವಾಮಿ

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮೂಲತಃ ಕಾಂಗ್ರೆಸ್‌ನಲ್ಲಿದ್ದವರು. ಕಳೆದ 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜಕೀಯ ಬೆಳವಣಿಗೆಗಳಿಂದ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾದರು. 2011ರಲ್ಲಿ ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಸಿಧಿ ಶಾಸಕರಾಗಿ ಆಯ್ಕೆ ಆಗಿದ್ದರು.

-------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net